9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ : ಚೊಚ್ಚಲ ಪ್ರಶಸ್ತಿ ಬೇಟೆಗೆ ಭಾರತ ನಿರೀಕ್ಷೆ

| Published : Oct 03 2024, 01:25 AM IST / Updated: Oct 03 2024, 04:52 AM IST

9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ : ಚೊಚ್ಚಲ ಪ್ರಶಸ್ತಿ ಬೇಟೆಗೆ ಭಾರತ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಯುಎಇಯಲ್ಲಿ ಗುರುವಾರದಿಂದ ಆರಂಭವಾಗಲಿದ್ದು, ಭಾರತ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

ದುಬೈ: ಕ್ರಿಕೆಟ್‌ ಲೋಕ ಈಗ ಮತ್ತೊಂದು ವಿಶ್ವಕಪ್‌ಗೆ ಸಜ್ಜಾಗಿದೆ. ಗುರುವಾರದಿಂದ ಯುಎಇಯಲ್ಲಿ 9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಆರಂಭಗೊಳ್ಳಲಿದೆ. ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ, 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 10 ತಂಡಗಳು ಅರಬ್ ನಾಡಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ.

ಈ ಬಾರಿ ಟೂರ್ನಿ ಬಾಂಗ್ಲಾದೇಶದಲ್ಲಿ ನಿಗದಿಯಾಗಿತ್ತು. ಆದರೆ ಬಾಂಗ್ಲಾದಲ್ಲಿ ಹಿಂಸಾಚಾರ ತಲೆದೋರಿದ್ದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಇತ್ತೀಚೆಗಷ್ಟೇ ಯುಎಇಗೆ ಸ್ತಳಾಂತರಿಸಲಾಗಿತ್ತು. ದುಬೈ ಹಾಗೂ ಶಾರ್ಜಾ ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಫೈನಲ್‌ ಸೇರಿದಂತೆ ಒಟ್ಟು 23 ಪಂದ್ಯಗಳು ನಡೆಯಲಿವೆ. ಟೂರ್ನಿ ಅ.20ರ ವರೆಗೆ ನಡೆಯಲಿದೆ. 

ಗುರುವಾರ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್‌ ಮುಖಾಮುಖಿಯಾಗಲಿದ್ದು, ದಿನದ 2ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಪರಸ್ಪರ ಸೆಣಸಾಡಲಿವೆ. ಈ ಬಾರಿಯೂ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡೇ ಟೂರ್ನಿಗೆ ಕಾಲಿಡಲಿದೆ. ಭಾರತ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡಗಳೂ ಟ್ರೋಫಿ ಜಯಿಸುವ ರೇಸ್‌ನಲ್ಲಿರುವ ಇತರ ಪ್ರಮುಖ ತಂಡಗಳು.ಟೂರ್ನಿಯ ಬಹುತೇಕ ದಿನ 2 ಪಂದ್ಯಗಳು ನಡೆಯಲಿದ್ದು, ದಿನದ ಮೊದಲ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಹಾಗೂ 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ. 

ಟೂರ್ನಿ ಮಾದರಿ ಹೇಗೆ?: 10 ತಂಡಗಳಿರುವ ಟೂರ್ನಿಯನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ತಲಾ 5 ತಂಡಗಳಿರಲಿವೆ. ಗುಂಪಿನ ಪ್ರತಿ ತಂಡಗಳು ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಅಂದರೆ ಒಂದು ತಂಡಕ್ಕೆ ಗುಂಪು ಹಂತದಲ್ಲಿ ನಾಲ್ಕು ಪಂದ್ಯಗಳು. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಅ.15ರಂದು ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿವೆ. ಅ.17 ಮತ್ತು 18ರಂದು ಸೆಮಿಫೈನಲ್‌, ಅ.20ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿದೆ.

ಎರಡು ಗುಂಪುಗಳು

‘ಎ’ ಗುಂಪು: ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಶ್ರೀಲಂಕಾ, ಪಾಕಿಸ್ತಾನ‘ಬಿ’ ಗುಂಪು: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ, ಸ್ಕಾಟ್ಲೆಂಡ್‌

ಈ ಹಿಂದಿನ ಚಾಂಪಿಯನ್ಸ್‌

ಈ ವರೆಗೆ ಆಸ್ಟ್ರೇಲಿಯಾ 6, ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ತಲಾ 1 ಬಾರಿ ಟ್ರೋಫಿ ಗೆದ್ದಿದೆ. ಆಸ್ಟ್ರೇಲಿಯಾ 2010, 2012, 2014, 2018, 2020 ಹಾಗೂ 2023ರಲ್ಲಿ ಚಾಂಪಿಯನ್‌ ಆಗಿತ್ತು. ಇಂಗ್ಲೆಂಡ್‌ 2009ರಲ್ಲಿ ಹಾಗೂ ವೆಸ್ಟ್‌ಇಂಡೀಸ್‌ 2016ರಲ್ಲಿ ಕಪ್‌ ಗೆದ್ದಿದೆ.

ಟೀಂ ಇಂಡಿಯಾಕ್ಕೆ ನಾಳೆ ಕಿವೀಸ್‌ ಮೊದಲ ಸವಾಲು2020ರ ರನ್ನರ್‌-ಅಪ್‌ ಭಾರತ ತಂಡ ಈ ಬಾರಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ತಂಡ ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧ ಆಡುವ ಮೂಲಕ ಈ ಬಾರಿ ಅಭಿಯಾನ ಆರಂಭಿಸಲಿದೆ. ತಂಡಕ್ಕೆ ಗುಂಪು ಹಂತದಲ್ಲೇ ಕಠಿಣ ಸವಾಲು ಎದುರಾಗಲಿದ್ದು, ಬಲಿಷ್ಠ ಆಸ್ಟ್ರೇಲಿಯಾ, ಬದ್ಧವೈರಿ ಪಾಕಿಸ್ತಾನ, ಹಾಲಿ ಏಷ್ಯಾಕಪ್‌ ಚಾಂಪಿಯನ್‌ ಶ್ರೀಲಂಕಾ ವಿರುದ್ಧ ಆಡಬೇಕಿದೆ. ತಂಡದಲ್ಲಿ ಸ್ಮೃತಿ ಮಂಧನಾ, ಶಫಾಲಿ ವರ್ಮಾ, ರಿಚಾ ಘೋಷ್‌, ಜೆಮಿಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್‌, ಕರ್ನಾಟಕದ ಶ್ರೇಯಾಂಕ ಪಾಟೀಲ್‌ ಸೇರಿ ತಾರಾ ಆಟಗಾರರಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಈ ವರೆಗೂ 3 ಬಾರಿ ಟಿ20 ವಿಶ್ವಕಪ್‌ನಲ್ಲಿ ತಂಡ ಮುನ್ನಡೆಸಿದ್ದು, ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಬಾರಿ ಚಾಂಪಿಯನ್‌ ಆಗದಿದ್ದರೆ ಅವರು ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಟಿ20 ವಿಶ್ವಕಪ್‌ ಪಂದ್ಯಗಳು ಭಾರತದಲ್ಲಿ ಸ್ಟಾರ್‌ಸ್ಪೋರ್ಟ್ಸ್‌ ಚಾನೆಲ್‌(ಟಿವಿ) ಹಾಗೂ ಡಿಸ್ನಿ+ಹಾಟ್‌ಸ್ಟಾರ್‌ ಆ್ಯಪ್‌ಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.