ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಆರ್‌ಸಿಬಿ ಮಹಿಳಾ ತಂಡಕ್ಕೆ ಇಲ್ಲ ಲಕ್‌: ಹ್ಯಾಟ್ರಿಕ್‌ ಸೋಲು!

| N/A | Published : Feb 28 2025, 12:46 AM IST / Updated: Feb 28 2025, 04:00 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಆರ್‌ಸಿಬಿ ಮಹಿಳಾ ತಂಡಕ್ಕೆ ಇಲ್ಲ ಲಕ್‌. ಆಡಿದ ಮೂರೂ ಪಂದ್ಯಗಳಲ್ಲಿ ಸೋಲು. ಗುಜರಾತ್‌ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಸ್ಮೃತಿ ಮಂಧನಾ ಪಡೆ.

 ಬೆಂಗಳೂರು : ಹಾಲಿ ಚಾಂಪಿಯನ್‌ ಆರ್‌ಸಿಬಿ ಡಬ್ಲ್ಯುಪಿಎಲ್‌ 3ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ವಡೋದರಾದಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಆರ್‌ಸಿಬಿ, ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತು ನಿರಾಸೆಗೊಂಡಿದೆ. ಗುರುವಾರ ನಡೆದ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆಗೆ 6 ವಿಕೆಟ್‌ಗಳ ಹೀನಾಯ ಸೋಲು ಎದುರಾಯಿತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 20 ಓವರಲ್ಲಿ 7 ವಿಕೆಟ್‌ಗೆ 125 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಗುಜರಾತ್‌ ಇನ್ನೂ 3.3 ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿತು. ಅಗ್ರ ಕ್ರಮಾಂಕ ಫ್ಲಾಪ್‌: ಆರ್‌ಸಿಬಿಗೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಡ್ಯಾನಿಯಲ್‌ ವ್ಯಾಟ್‌ 4, ಎಲ್ಲೀಸ್‌ ಪೆರ್ರಿ 0, ಸ್ಮೃತಿ ಮಂಧನಾ 10 ರನ್‌ಗೆ ಔಟಾದರು. ಮೊದಲ 6 ಓವರಲ್ಲಿ ಆರ್‌ಸಿಬಿ 3 ವಿಕೆಟ್‌ಗೆ ಕೇವಲ 26 ರನ್‌ ಗಳಿಸಿತು. ರಾಘವಿ ಬಿಸ್ತ್‌ (22), ಕನಿಕಾ ಅಹುಜಾ (33), ಜಾರ್ಜಿಯಾ ವೇರ್‌ಹ್ಯಾಮ್‌ (20*), ಕಿಮ್‌ ಗಾರ್ಥ್‌ (14) ಹೋರಾಟ ನಡೆಸಿ ತಂಡದ ಮೊತ್ತ 100 ರನ್‌ ದಾಟಲು ನೆರವಾದರು.

ಸುಲಭ ಗುರಿ ಬೆನ್ನತ್ತಿದ ಗುಜರಾತ್‌ಗೆ ನಾಯಕಿ ಆಶ್ಲೆ ಗಾರ್ಡ್ನರ್‌ರ ಅರ್ಧಶತಕ ನೆರವಾಯಿತು. ಕೇವಲ 31 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 58 ರನ್‌ ಸಿಡಿಸಿ, ಈ ಆವೃತ್ತಿಯಲ್ಲಿ 3ನೇ ಅರ್ಧಶತಕ ದಾಖಲಿಸಿದರು. ಫೋಬ್‌ ಲಿಚ್‌ಫೀಲ್ಡ್‌ ಔಟಾಗದೆ 30 ರನ್‌ ಕೊಡುಗೆ ನೀಡಿದರು.

ಆರ್‌ಸಿಬಿಗೆ ಲೀಗ್‌ ಹಂತದಲ್ಲಿ ಇನ್ನು 3 ಪಂದ್ಯ ಬಾಕಿ ಇದ್ದು, ಅಂಕಪಟ್ಟಿಯಲ್ಲಿ ಅಗ್ರ-3ರೊಳಗೆ ಸ್ಥಾನ ಉಳಿಸಿಕೊಂಡು ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ಬಾಕಿ ಇರುವ ಮೂರೂ ಪಂದ್ಯಗಳನ್ನು ಗೆಲ್ಲಬೇಕಿದೆ. ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 125/7 (ಕನಿಕಾ 33, ರಾಘವಿ 22, ತನುಜಾ 2-16, ಡಾಟಿನ್‌ 2-31), ಗುಜರಾತ್‌ 16.3 ಓವರಲ್ಲಿ 126/4 (ಗಾರ್ಡ್ನರ್‌ 58, ಲಿಚ್‌ಫೀಲ್ಡ್‌ 30*, ರೇಣುಕಾ 2-24)

ಇಂದಿನ ಪಂದ್ಯ: ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌, ಸಂಜೆ 7.30ಕ್ಕೆ