ಸಾರಾಂಶ
ದುಬೈ: 2023-25ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂದು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಘೋಷಿಸಿದೆ.
ಪಂದ್ಯ 2025ರ ಜೂ.11ರಿಂದ 15ರ ವರೆಗೆ ನಡೆಯಲಿದೆ. ಜೂ.16 ಮೀಸಲು ದಿನವಾಗಿರಲಿದೆ ಎಂದು ತಿಳಿಸಿದೆ.2019-21ರ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಸೌತಾಂಪ್ಟನ್, 2021-23ರ ಫೈನಲ್‌ಗೆ ಓವರ್ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಸತತ 3ನೇ ಬಾರಿಯೂ ಇಂಗ್ಲೆಂಡ್‌ನ ಕ್ರೀಡಾಂಗಣದಲ್ಲೇ ಪಂದ್ಯ ನಡೆಯಲಿದೆ. ಕಳೆದೆರಡು ಚಾಂಪಿಯನ್‌ಶಿಪ್‌ಗಳಲ್ಲಿ ಭಾರತ ಫೈನಲ್‌ಗೇರಿತ್ತು.
ಆದರೆ ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.ಈ ಬಾರಿ ಕೂಟದಲ್ಲಿ ಸದ್ಯ ಭಾರತ ಶೇ.68.52 ಗೆಲುವಿನ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ(ಶೇ.62.50) 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್(ಶೇ.50.00), ಬಾಂಗ್ಲಾದೇಶ(ಶೇ.45.83), ಇಂಗ್ಲೆಂಡ್(ಶೇ.45.00) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಮೆಕ್ಕಲಂ ಇಂಗ್ಲೆಂಡ್ ಟಿ20, ಏಕದಿನ ತಂಡಕ್ಕೂ ಕೋಚ್
ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿರುವ ನ್ಯೂಜಿಲೆಂಡ್‌ನ ಬ್ರೆಂಡಾನ್ ಮೆಕ್ಕಲಮ್ ಏಕದಿನ ಹಾಗೂ ಟಿ20 ತಂಡಕ್ಕೂ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮೆಕ್ಕಲಂ 2022ರಿಂದ ಟೆಸ್ಟ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮೆಕ್ಕಲಂರ ಅವಧಿಯನ್ನು 2027ರ ವರೆಗೂ ವಿಸ್ತರಿಸಿದೆ. ಈ ಮೊದಲು ಮ್ಯಾಥ್ಯೂ ಮೋಟ್ ಇಂಗ್ಲೆಂಡ್ ಏಕದಿನ, ಟಿ20ಗೆ ಕೋಚ್ ಆಗಿದ್ದರು. ಆದರೆ ವಿಶ್ವಕಪ್‌ಗಳಲ್ಲಿ ಇಂಗ್ಲೆಂಡ್ ಸಾಧಾರಣ ಪ್ರದರ್ಶನ ತೋರಿದ್ದರಿಂದ ಜು.30ರಂದು ಮೋಟ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.