ನೀವು ಕೊಟ್ಟ ಚುರ್ಮಾ ನನ್ನ ತಾಯಿಯನ್ನು ನೆನಪಿಸಿತು: ಚೋಪ್ರಾ ತಾಯಿಗೆ ಮೋದಿ ಭಾವುಕ ಪತ್ರ

| Published : Oct 03 2024, 01:25 AM IST / Updated: Oct 03 2024, 04:54 AM IST

ನೀವು ಕೊಟ್ಟ ಚುರ್ಮಾ ನನ್ನ ತಾಯಿಯನ್ನು ನೆನಪಿಸಿತು: ಚೋಪ್ರಾ ತಾಯಿಗೆ ಮೋದಿ ಭಾವುಕ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ತಾಯಿ ತಯಾರಿಸಿದ ಚುರ್ಮಾವನ್ನು ಉಡುಗೊರೆಯಾಗಿ ನೀಡಿದರು. ಚುರ್ಮಾ ಸವಿದ ಮೋದಿ ಭಾವುಕರಾದರು ಮತ್ತು ನೀರಜ್‌ ತಾಯಿಗೆ ಪತ್ರ ಬರೆದು, ತಮ್ಮ ತಾಯಿಯ ನೆನಪುಗಳು ಮರುಕಳಿಸಿದವು ಎಂದು ಬರೆದಿದ್ದಾರೆ.

ನವದೆಹಲಿ: ನೀವು ಮಾಡಿಕೊಟ್ಟ ಚುರ್ಮಾ(ಖಾದ್ಯ) ನನ್ನ ತಾಯಿಯನ್ನು ನೆನಪಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾರ ತಾಯಿ ಸರೋಜ್‌ ದೇವಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಮಂಗಳವಾರ ಜಮೈಕಾ ಪ್ರಧಾನಿ ಆ್ಯಂಡ್ರ್ಯೂ ಹಾಲ್ನೆಸ್‌ ಜೊತೆ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಮೋದಿಯನ್ನು ಭೇಟಿಯಾಗಿದ್ದ ನೀರಜ್‌, ತಮ್ಮ ತಾಯಿ ತಯಾರಿಸಿದ್ದ ಚುರ್ಮಾ ನೀಡಿದ್ದರು. 

ಬುಧವಾರ ನೀರಜ್‌ ತಾಯಿಗೆ ಪತ್ರ ಬರೆದಿರುವ ಮೋದಿ, ‘ಸಹೋದರ ನೀರಜ್ ನನ್ನೊಂದಿಗೆ ಈ ಚುರ್ಮಾದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರೂ ಇಂದು ನಾನು ಅದನ್ನು ತಿಂದು ಭಾವುಕನಾದೆ. ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯದ ಈ ಉಡುಗೊರೆ ನನಗೆ ನನ್ನ ತಾಯಿಯನ್ನು ನೆನಪಿಸಿತು. ನೀವು ತಯಾರಿಸಿದ ಆಹಾರ ನೀರಜ್‌ಗೆ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿ ನೀಡುತ್ತದೆ. ಅದೇ ರೀತಿ ನವರಾತ್ರಿ ವೇಳೆ ದೇಶ ಸೇವೆ ಮಾಡಲು ಈ ಚುರ್ಮಾ ನನಗೆ ಶಕ್ತಿ ನೀಡಲಿದೆ’ ಎಂದಿದ್ದಾರೆ.

ಬಿಎಫ್‌ಸಿ-ಮುಂಬೈ ಗೋಲುರಹಿತ ಡ್ರಾ

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಹಾಗೂ ಹಾಲಿ ಚಾಂಪಿಯನ್‌ ಮುಂಬೈ ಎಫ್‌ಸಿ ನಡುವಿನ ಬುಧವಾರದ ಪಂದ್ಯ ಗೋಲುರಹಿತ ಡ್ರಾಗೊಂಡಿತು. ಆರಂಭಿಕ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದಿ ಬಿಎಫ್‌ಸಿ, ಮುಂಬೈ ವಿರುದ್ಧದ ಡ್ರಾದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 

ತಂಡ 4 ಪಂದ್ಯಗಳಲ್ಲಿ ಒಟ್ಟು 10 ಅಂಕ ಕಲೆಹಾಕಿದೆ. ಅತ್ತ ಮುಂಬೈ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಡ್ರಾ ಹಾಗೂ 1 ಸೋಲಿನೊಂದಿಗೆ ಕೇವಲ 2 ಅಂಕ ಗಳಿಸಿದ್ದು, ಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಬಾಕಿಯಾಗಿದೆ. ಸುನಿಲ್‌ ಚೆಟ್ಟಿ ನಾಯಕತ್ವದ ಬಿಎಫ್‌ಸಿ ಮುಂದಿನ ಪಂದ್ಯದಲ್ಲಿ ಅ.18ರಂದು ಪಂಜಾಬ್‌ ಎಫ್‌ಸಿ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.