ಸಾರಾಂಶ
ಸತತ 3 ದಿನಗಳಿಂದ ಬೆಂಕಿಯಲ್ಲಿ ಬೆಂದಿರುವ ಲಾಸ್ ಏಂಜಲೀಸ್ ಬೆಂಕಿ ಶುಕ್ರವಾರ ಮತ್ತಷ್ಟು ವ್ಯಾಪಿಸಿದ್ದು ಹೊಸದಾಗಿ ವೆಸ್ಟ್ ಹಿಲ್ಸ್ ಎಂಬಲ್ಲಿ ಕಾಣಿಸಿಕೊಂಡಿದೆ
ಲಾಸ್ ಏಂಜಲೀಸ್: ಸತತ 3 ದಿನಗಳಿಂದ ಬೆಂಕಿಯಲ್ಲಿ ಬೆಂದಿರುವ ಲಾಸ್ ಏಂಜಲೀಸ್ ಬೆಂಕಿ ಶುಕ್ರವಾರ ಮತ್ತಷ್ಟು ವ್ಯಾಪಿಸಿದ್ದು ಹೊಸದಾಗಿ ವೆಸ್ಟ್ ಹಿಲ್ಸ್ ಎಂಬಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆ ಬೆಂಕಿಯಿಂದ ಒಟ್ಟು 32 ಸಾವಿರ ಎಕರೆಯಲ್ಲಿ ಹಾನಿ ಸಂಭವಿಸಿದೆ ಹಾಗೂ ಭಸ್ಮವಾದ ಕಟ್ಟಡಗಳ ಸಂಖ್ಯೆ 10 ಸಾವಿರಕ್ಕೇರಿದೆ. ಮೃತರ ಸಂಖ್ಯೆ 10ಕ್ಕೆ ಏರಿದೆ. ಅಲ್ಲದೆ, ಹಾನಿ ಪ್ರಮಾಣ 13 ಲಕ್ಷ ಕೋಟಿ ರು. ತಲುಪಿದೆ ಎಂದ ಅಂದಾಜಿಸಲಾಗಿದೆ. ಇದು ಕರ್ನಾಟಕ ವಾರ್ಷಿಕ ಬಜೆಟ್‌ನ ಹೆಚ್ಚು ಕಡಿಮೆ 3 ಪಟ್ಟು ಎಂಬುದು ವಿಶೇಷ.
ಶುಕ್ರವಾರ ವೆಸ್ಟ್ ಹಿಲ್ಸ್ ಎಂಬಲ್ಲಿ ಹೊಸ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಸುಮಾರು 900 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಲಾಸ್ ಏಂಜಲೀಸ್ ನಗರದಿದ 40 ಕಿ.ಮೀ. ದೂರಕ್ಕೆ ಬೆಂಕಿ ಕೇಂದ್ರೀಕೃತವಾಗಿದೆ. ಆದರೆ ಭರದಿಂದ ಬೀಸುತ್ತಿರುವ ಗಾಳಿಯಿಂದಾಗಿ ಇದು ವೇಗವಾಗಿ ಹರಡುವ ಸಂಭವವಿದೆ. ಅಗ್ನಿಶಾಮಕ ದಳದವರು ಗುರುವಾರ ಕೊಂಚಮಟ್ಟಿಗೆ ಬೆಂಕಿ ಆರಿಸುವಲ್ಲಿ ಸಫಲರಾದ ಸ್ವಲ್ಪ ಹೊತ್ತಿಗೇ ಹೊಸ ಕಾಡ್ಗಿಚ್ಚು ಹತ್ತಿಕೊಂಡಿರುವುದು ದುರದೃಷ್ಟಕರ.
ಈವರೆಗೆ ಒಟ್ಟು 10 ಜನ ಬೆಂಕಿಗೆ ಆಹುತಿಯಾಗಿದ್ದು, ಕಾಡ್ಗಿಚ್ಚಿನ ವ್ಯಾಪ್ತಿ 26 ಸಾವಿರದಿಂದ 32 ಸಾವಿರ ಎಕರೆಗೆ ವಿಸ್ತರಿಸಿದೆ. ಅಂತೆಯೇ, 10 ಸಾವಿರ ಕಟ್ಟಡಗಳಿಗೆ ಹಾನಿಯಾಗಿದ್ದು, ಹೊಸದಾಗಿ ಸುಮಾರು 18 ಸಾವಿರ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಈವರೆಗೆ 1.5 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ.ಇದಲ್ಲದೆ, ಇನ್ನೂ 60 ಸಾವಿರ ಕಟ್ಟಡಗಳು ಅಪಾಯದಲ್ಲಿವೆ.
ಕಳೆದೆರಡು ದಶಕಗಳಿಂದ ಮಳೆಯಿಲ್ಲದೆ ಗಿಡಮರಗಳೆಲ್ಲಾ ಒಣಗಿದ್ದರಿಂದ ಬೆಂಕಿ ಹೊತ್ತಿಕೊಂಡು ಗಾಳಿಯಿಂದಾಗಿ ಹರಡುತ್ತಿದೆ ಎನ್ನಲಾಗಿದೆಯಾದರೂ, ಕಾಡ್ಗಿಚ್ಚು ಸೃಷ್ಟಿಗೆ ಮೂಲ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರದ ಹಾಲಿವುಡ್ ಬೆಂಕಿ:
ಹಾಲಿವುಡ್ ಹಿಲ್ಸ್ ಹಾಗೂ ಸ್ಟುಡಿಯೋ ಸಿಟಿಯಲ್ಲಿ ಹತ್ತಿಕೊಂಡಿದ್ದ ಬೆಂಕಿಯನ್ನು ವಿಮಾನಗಳ ಮೂಲಕ ನೀರನ್ನು ಸಿಂಪಡಿಸಿ ನಂದಿಲಾಗಿತ್ತು. ಆದರೆ ಗಾಳಿ ಮತ್ತಷ್ಟು ವೇಗವಾಗಿ ಬೀಸತೊಡಗಿದ ಕಾರಣ ಆ ಯತ್ನವನ್ನೂ ತಾತ್ಕಾಲಿಕವಾಗಿ ಕೈಬಿಡಬೇಕಾಗಿದೆ. ನಾಯಿಗಳನ್ನು ಬಳಸಿ ಅವಶೇಷಗಳಲ್ಲಿ ಸಿಲುಕಿರುವವರಿಗಾಗಿ ಶೋಧ ನಡೆಸಲಾಗುತ್ತಿದೆ.
ನೆರವಿಗಿಳಿದ ನ್ಯಾಷನಲ್ ಗಾರ್ಡ್:
ಕೈಮೀರುತ್ತಿರುವ ಕಾಡ್ಗಿಚ್ಚನ್ನು ಶಮನಗೊಳಿಸುವಲ್ಲಿ ನೆರವಾಗಲು, ಅಮೆರಿಕದ ತುರ್ತು ವಿಪತ್ತು ಕಾರ್ಯಪಡೆಯಾದ ನ್ಯಾಷನಲ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ಟ್ರುಡೋ ನೆರವು:
ಒಂದು ಕಡೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋರನ್ನು ಕೆಣಕುವ ಕೆಲಸ ಮಾಡುತ್ತಿದ್ದರೆ, ಇತ್ತ ಟ್ರುಡೋ ಕಾಡ್ಗಿಚ್ಚಿನಿಂದ ನಲುಗಿರುವ ಕ್ಯಾಲಿಪೋರ್ನಿಯಾಗೆ ಅಗ್ನಿಶಾಮಕ ಸಂಪನ್ಮೂಲಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ.
ಕಾಡ್ಗಿಚ್ಚು ಸ್ಥಳದಲ್ಲೀಗ ಲೂಟಿ: ಕರ್ಫ್ಯೂ ಜಾರಿ
ಲಾಸ್ ಏಂಜಲೀಸ್: ಕಾಡ್ಗಿಚ್ಚಿನ ನಡುವೆ ಸಿಲುಕಿರುವವರು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನಡುವೆಯೂ ಆ ಪ್ರದೇಶದಲ್ಲಿ ಇದೀಗ ಕಳ್ಳಕಾಕರರ ಹಾವಳಿ ಶುರುವಾಗಿದೆ. ಕಾಡ್ಗಿಚ್ಚು ಶುರುವಾದಾಗಿನಿಂದ ಈವರೆಗೆ, ಮನೆ ಬಿಟ್ಟು ಹೋದವರ ವಸ್ತುಗಳ ಲೂಟಿಯಲ್ಲಿ ತೊಡಗಿದ್ದ 20 ಜನರನ್ನು ಬಂಧಿಸಲಾಗಿದೆ. ಅತ್ತ ಸಾಂಟಾ ಮೋನಿಕಾ ನಗರದಲ್ಲಿ ಕಾನೂನು ಪಾಲನೆ ಹದಗೆಟ್ಟ ಹಿನ್ನೆಲೆಯಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಜೊತೆಗೆ, ಸ್ಥಳಾಂತರಗೊಂಡ ಜನರ ಆಸ್ತಿ ರಕ್ಷಣೆಗೆ ನ್ಯಾಷನಲ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ಹಾಲಿವುಡ್ ಚಿಹ್ನೆ ಸುರಕ್ಷಿತ, ಬೆಂಕಿ ಸುದ್ದಿ ಸುಳ್ಳು
ಲಾಸ್ ಏಂಜಲಿಸ್: ಹಾಲಿವುಡ್ ಚಿತ್ರರಂಗದ ಪ್ರಮುಖ ತಾಣವಾಗಿರುವ ಗುಡ್ಡದ ಮೇಲಿನ ಜನಪ್ರಿಯ ‘ಹಾಲಿವುಡ್ ಚಿಹ್ನೆ’ಗೆ ಬೆಂಕಿ ತಗುಲಿ, ಅದು ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸುಳ್ಳು. ಆ ಚಿಹ್ನೆಗೆ ಇದುವರೆಗೆ ಯಾವುದೇ ಹಾನಿಯಾಗಿಲ್ಲ. ಕೃತಕ ಬುದ್ಧಿಮತ್ತೆ ಬಳಸಿ ಅಂಥ ದೃಶ್ಯ ಸೃಷ್ಟಿಸಲಾಗಿದೆ ಎಂದು ಪಾರ್ಕ್‌ನ ಅಧ್ಯಕ್ಷ ಜೆಫ್ ಝರಿನ್ನಮ್ ಸ್ಪಷ್ಟನೆ ನೀಡಿದ್ದಾರೆ. ಹಾಲಿವುಡ್ ಚಿಹ್ನೆ ಇರುವ ಗ್ರಿಫಿತ್ ಪಾರ್ಕ್ ಅನ್ನು ಸುರಕ್ಷತಾ ದೃಷ್ಟಿಯಿಂದ ಸದ್ಯ ಮುಚ್ಚಲಾಗಿದೆ.