ಅ.7ರ ನಂತರ ಅತಿದೊಡ್ಡ ದಾಳಿ ನಡೆಸಿದ ಹಮಾಸ್‌, ಇಸ್ರೇಲ್‌ನ 17 ಸೈನಿಕರನ್ನು ಹತ್ಯೆಗೈದಿದೆ. ಇದರಿಂದ ಕ್ರುದ್ಧರಾಗಿರುವ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ವಿರುದ್ದ ಸಂಪೂರ್ಣ ಗೆಲುವು ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಜೆರುಸಲೆಂ: ಇಸ್ರೇಲಿ ಪಡೆಗಳನ್ನು ಗುರಿಯಾಗಿಸಿ ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್‌ ಉಗ್ರರು ಮಂಗಳವಾರ ನಡೆಸಿದ ಭೀಕರ ಗ್ರೆನೇಡ್‌ ದಾಳಿಯಲ್ಲಿ 21 ಇಸ್ರೇಲಿ ಯೋಧರು ಹತರಾಗಿದ್ದಾರೆ. 

ಕಳೆದ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ ದೇಶದೊಳಗೆ ನುಗ್ಗಿ ನಡೆಸಿದ ದಾಳಿಯ ಬಳಿಕ ಅತಿದೊಡ್ಡ ದಾಳಿ ಇದಾಗಿದೆ.

ಖಾನ್‌ ಯೂನಿಸ್‌ನಲ್ಲಿ ಇಸ್ರೇಲ್‌ ಸೈನಿಕರು ಎರಡು ಬೃಹತ್‌ ಕಟ್ಟಡ ಧ್ವಂಸಮಾಡಲು ಸ್ಫೋಟಕ ಸಿದ್ಧಪಡಿಸಿಕೊಳ್ಳುತ್ತಿರುವ ಶಂಕೆಯ ಮೇಲೆ ಹಮಾಸ್‌ ಬಂದೂಕುಧಾರಿಯೊಬ್ಬ ಹಾರಿಸಿದ ಗ್ರೆನೇಡ್‌ಗೆ ಇಸ್ರೇಲ್‌ ಸೈನಿಕರಿದ್ದ ಎರಡು ಮಹಡಿಯುಳ್ಳ ಎರಡು ಕಟ್ಟಡಗಳು ಧ್ವಂಸವಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ನಡುವೆ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು, ‘ವೀರಮರಣ ಹೊಂದಿದ ಸೈನಿಕರಿಗೆ ಸಂತಾಪ ಸೂಚಿಸುತ್ತೇನೆ. 

ಆದರೆ ನಾವು ಸಂಪೂರ್ಣವಾಗಿ ಹಮಾಸ್‌ ಉಗ್ರರ ಮೇಲೆ ಜಯ ಸಾಧಿಸುವ ತನಕ ಹಿಂದೆ ಸರಿಯುವುದಿಲ್ಲ’ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕದನವಿರಾಮಕ್ಕೆ ಇಂಗಿತ: ಈ ನಡುವೆ ಇಸ್ರೇಲ್‌ ಕದನವಿರಾಮಕ್ಕೆ ಒಲವು ತೋರಿದೆ. ಈ ಸಮಯದಲ್ಲಿ ಉಭಯ ಪಕ್ಷಗಳ ಕಡೆಯಿರುವ ಒತ್ತೆಯಾಳುಗಳ ಬಿಡುಗಡೆಗೆ ಆದು ಆಗ್ರಹಿಸಬಹುದ ಎಂದು ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್‌ ದೇಶದ ಮೂಲಗಳು ತಿಳಿಸಿವೆ. 

ಆದರೆ ಇದನ್ನು ಹಮಾಸ್‌ ತಿರಸ್ಕರಿಸಿದ್ದು, ಇಸ್ರೇಲ್‌ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೆ ಯಾವುದೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದೆ ಎನ್ನಲಾಗಿದೆ.