ಸಾರಾಂಶ
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದ ರೈಲ್ವೆ ಸ್ಟೇಷನ್‌ವೊಂದರಲ್ಲಿ ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟದಂಥ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಪ್ರಮುಖ ನಗರವಾದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು, 25 ಮಂದಿ ಸಾವನ್ನಪ್ಪಿ, 62 ಜನರು ಗಾಯಗೊಂಡಿದ್ದಾರೆ.
ಶನಿವಾರ ಬೆಳಗ್ಗೆ 9 ಗಂಟೆಗೆ ಪೇಶಾವರಕ್ಕೆ ಜಾಫರ್ ಎಕ್ಸ್‌ಪ್ರೆಸ್ ಹೊರಡುವ ಮುನ್ನ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ. ರೈಲಿನ ಆಗಮನಕ್ಕೆ ಪ್ರಯಾಣಿಕರು ಕಾದಿದ್ದರು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದನ್ನು ಗಮನಿಸಿದ ಆತ್ಮಹತ್ಯಾ ದಾಳಿಕೋರ, ಕೃತ್ಯ ಎಸಗಿದ್ದಾನೆ. ಜನಸಂದಣಿ ಜಾಸ್ತಿ ಇದ್ದ ಕಾರಣ ಸಾವು-ನೋವು ಹೆಚ್ಚಿದೆ.
‘ಬ್ಯಾಗ್ ಸಮೇತ ಬಂದ ಪ್ರಯಾಣಿಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಬಲಿಯಾಗಿರುವವರ ಪೈಕಿ ಮಹಿಳೆಯರು, ಮಕ್ಕಳು ಮತ್ತು ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನದ ನಿಷೇಧಿತ ಉಗ್ರ ಬಲೂಚ್ ಲಿಬರೇಷನ್ ಆರ್ಮಿ(ಬಿಎಸ್‌ಎ) ದಾಳಿಯ ಹೊಣೆ ಹೊತ್ತುಕೊಂಡಿದೆ.
ಸಿಸಿಟೀವಿಯಲ್ಲಿ ಸೆರೆ:
ಬಾಂಬ್ ಸ್ಫೋಟದ ದೃಶ್ಯ ಸಿಸಿಟೀವಿಯಲ್ಲೂ ಸೆರೆಯಾಗಿದ್ದು. ಬೆಚ್ಚಿ ಬೀಳಿಸುವಂತಿದೆ.