ಇಸ್ಕಾನ್‌ ಅನುಯಾಯಿಗಳು-ಪೊಲೀಸರ ಘರ್ಷಣೆ ಬೆನ್ನಲ್ಲೇ ‘ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ’ ನಿಷೇಧ?

| Published : Nov 28 2024, 12:32 AM IST / Updated: Nov 28 2024, 04:46 AM IST

ಇಸ್ಕಾನ್‌ ಅನುಯಾಯಿಗಳು-ಪೊಲೀಸರ ಘರ್ಷಣೆ ಬೆನ್ನಲ್ಲೇ ‘ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ’ ನಿಷೇಧ?
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ಕಾನ್‌ ಹಿಂದೂ ಅರ್ಚಕ ಚಿನ್ಮಯ ಕೃಷ್ಣ ದಾಸ್ ಅವರ ಬಂಧನ ಮತ್ತು ಇಸ್ಕಾನ್‌ ಅನುಯಾಯಿಗಳು-ಪೊಲೀಸರ ಘರ್ಷಣೆ ಬೆನ್ನಲ್ಲೇ ‘ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ’ಯನ್ನು (ಇಸ್ಕಾನ್‌) ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಢಾಕಾ: ಇಸ್ಕಾನ್‌ ಹಿಂದೂ ಅರ್ಚಕ ಚಿನ್ಮಯ ಕೃಷ್ಣ ದಾಸ್ ಅವರ ಬಂಧನ ಮತ್ತು ಇಸ್ಕಾನ್‌ ಅನುಯಾಯಿಗಳು-ಪೊಲೀಸರ ಘರ್ಷಣೆ ಬೆನ್ನಲ್ಲೇ ‘ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ’ಯನ್ನು (ಇಸ್ಕಾನ್‌ ಅನ್ನು) ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಬಾಂಗ್ಲಾ ಸರ್ಕಾರ, ‘ಇದು ಧಾರ್ಮಿಕ ಮೂಲಭೂತವಾದಿ ಸಂಘಟನೆ’ ಎಂದಿದೆ.‘ಸಮ್ಮಿಲಿತಾ ಸನಾತನಿ ಜೋತೆ’ ಎಂಬ ಹಿಂದೂ ಸಂಘಟನೆಯ ನಾಯಕರೂ ಆದ ಚಿನ್ಮಯ ಕೃಷ್ಣ ದಾಸ್ ಅವರನ್ನು ಬಾಂಗ್ಲಾದೇಶದ ಪೊಲೀಸರು ಢಾಕಾದಲ್ಲಿ ಬಂಧಿಸಿ ಭಯೋತ್ಪಾದನೆ ಹಾಗೂ ದೇಶದ್ರೋಹ ಕೇಸು ಹಾಕಿದ್ದರು. ಅವರ ಬಂಧನ ಖಂಡಿಸಿ ನಡೆದ ಹಿಂಸಾಚಾರದಲ್ಲಿ ಒಬ್ಬ ವಕೀಲನ ಹತ್ಯೆ ಆಗಿತ್ತು.

ಇದರ ಬೆನ್ನಲ್ಲೇ ವಕೀಲ ಮೊನಿರುಜ್ಜಮಾನ್‌ ಅರ್ಜಿ ಸಲ್ಲಿಸಿ, ಗಲಭೆಗ್ರಸ್ತ ರಂಗಪುರ ಹಾಗೂ ಛತ್ತೋಗ್ರಾಮದಲ್ಲಿ ನಿಷೇಧಾಜ್ಞೆ ಹೇರಬೇಕು ಎಂದರು. ಜೊತೆಗೆ ಇಸ್ಕಾನ್‌ ಹಿಂಸಾ ಕೃತ್ಯ ಎಸಗಿದೆ ಎಂಬ ಪತ್ರಿಕಾ ವರದಿ ಹಾಜರುಪಡಿಸಿ ಅದರ ನಿಷೇಧ ಕೋರಿದರು.ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟು, ‘ಇಸ್ಕಾನ್‌ ಸಂಘಟನೆಯ ಹಿನ್ನೆಲೆ ಏನು? ಅದರ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದೀರಾ? ಹಿಂಸೆ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ?’ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್‌ ಅಸಾದುಜ್ಜಮಾನ್‌, ‘ಇಸ್ಕಾನ್‌ ರಾಜಕೀಯ ಪಕ್ಷವಲ್ಲ. ಅದು ಧಾರ್ಮಿಕ ಮೂಲಭೂತವಾದಿ ಸಂಘಟನೆ. ಸರ್ಕಾರವು ಈಗಾಗಲೇ ಆ ಸಂಸ್ಥೆ ಬಗ್ಗೆ ಪರಿಶೀಲಿಸುತ್ತಿದೆ. ಯಾರೋ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.ಇದಕ್ಕೆ ಉತ್ತರಿಸಿದ ಕೋರ್ಟ್‌, ‘ಇಸ್ಕಾನ್‌ ಬಗ್ಗೆ ಕೈಗೊಂಡ ತನಿಖೆ ಬಗ್ಗೆ ಗುರುವಾರ ಮಾಹಿತಿ ನೀಡಬೇಕು’ ಎಂದು ಸೂಚಿಸಿ ವಿಚಾರಣೆ ಮುಂಡೂಡಿತು.

30 ಮಂದಿ ಸೆರೆ:ಈ ನಡುವೆ, ಢಾಕಾದಲ್ಲಿ ಮಂಗಳವಾರ ನಡೆದ ವಕೀಲ ಸೈಫುಲ್‌ ಇಸ್ಲಾಂ ಹತ್ಯೆ ಕುರಿತಂತೆ ಢಾಕಾ ಪೊಲೀಸರು ಬುಧವಾರ 30 ಜನರನ್ನು ಬಂಧಿಸಿದ್ದಾರೆ. ಆದರೆ ಈ ಬಂಧಿತರು ಯಾರೆಂಬ ವಿವರ ನೀಡಲು ಪೊಲೀಸ್ ವಕ್ತಾರ ನಿರಾಕರಿಸಿದ್ದಾರೆ.

ಇಸ್ಕಾನ್‌ ಅನುಯಾಯಿಗಳು ವಕೀಲನನ್ನು ಹತ್ಯೆ ಮಾಡಿದ್ದಾರೆ ಎಂದು ಕೆಲವರು ಮಂಗಳವಾರ ಆರೋಪಿಸಿದ್ದರು.ಜನರ ದಂಗೆಗೆ ಬೆಚ್ಚಿ ಹಿಂದಿನ ಪ್ರಧಾನಿ ಶೇಖ್‌ ಹಸೀನಾ ಬಾಂಗ್ಲಾದಿಂದ ಪರಾರಿ ಆದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಹಸೀನಾ ವಿರೋಧಿಗಳು ಹಿಂದೂಗಳ ಮೇಲೆ ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ್ದರು. ಆಗ ಇಸ್ಕಾನ್‌ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ದಂಗೆಕೋರರ ವಿರುದ್ಧ ನಡೆದಿದ್ದವು. ಆಗ ಇಸ್ಕಾನ್‌ ವಿರುದ್ಧ ಬಾಂಗ್ಲಾ ಧಾರ್ಮಿಕ ಕಟ್ಟರ್‌ವಾದಿಗಳು ಸಿಡಿದೆದ್ದಿದ್ದರು.

ಇಸ್ಕಾನ್‌ ಭಕ್ತರನ್ನು ಹಿಡಿದು ಹಿಡಿದು ಕೊಲ್ಲಿ: ಬಾಂಗ್ಲಾ ಬೀದಿಯಲ್ಲಿ ಘೋಷಣೆಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಿನ ಮೂಲಭೂತವಾದಿಗಳು ಇಸ್ಕಾನ್‌ ಭಕ್ತರನ್ನು ಕೊಂದು ಹಾಕುವಂತೆ ಕರೆ ಕೊಟ್ಟಿದ್ದಾರೆ. ಮಂಗಳವಾರ ರಾತ್ರಿ ಚಿತ್ತಗಾಂಗ್‌ ಪ್ರಾಂತ್ಯದ ರಂಗುನಿಯಾ ಎಂಬಲ್ಲಿ ನಡೆದ ಬೃಹತ್‌ ಮೆರವಣಿಗೆಯಲ್ಲಿ ಈ ಬೆಳವಣಿಗೆ ನಡೆದಿದೆ. ಅಲ್ಲಿ ನೆರೆದ ಜನರು, ಇಸ್ಕಾನ್‌ ಭಕ್ತರನ್ನು ಒಬ್ಬೊಬ್ಬರಾಗಿಯೇ ಹಿಡಿಯಿರಿ. ಬಳಿಕ ಎಲ್ಲರನ್ನು ಕೊಂದು ಹಾಕಿ ಎಂದು ಘೋಷಣೆ ಕೂಗುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಹಿಂದೂಗಳ ಶಾಂತಿಯುತ ಸಹಬಾಳ್ವೆಗೆ ಉತ್ತೇಜನ ನೀಡಿ: ಬಾಂಗ್ಲಾಗೆ ಇಸ್ಕಾನ್‌ಢಾಕಾ: ಇಸ್ಕಾನ್‌ ಸದಸ್ಯ ಚಿನ್ಮಯ ಕೃಷ್ಣದಾಸ ಬ್ರಹ್ಮಚಾರಿ ಅವರ ಬಂಧನವನ್ನು ಖಂಡಿಸಿರುವ ಇಸ್ಕಾನ್‌ ಸಂಸ್ಥೆ, ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಶಾಂತಿಯುತ ಸಹಬಾಳ್ವೆ ಉತ್ತೇಜಿಸುವಂತೆ ಯೂನಸ್‌ ಸರ್ಕಾರವನ್ನು ಒತ್ತಾಯಿಸಿದೆ. ಬಾಂಗ್ಲಾ ಇಸ್ಕಾನ್‌ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ ಬ್ರಹ್ಮಚಾರಿ ಮಾತನಾಡಿ, ಚಿನ್ಮಯ ಕೃಷ್ಣದಾಸ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಹಾಕಿರುವುದು ಕಳವಳಕಾರಿ. ಜತೆಗೆ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸಾಚಾರ ನಡೆಯುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ಹಿಂದೂಗಳು ಶಾಂತಿಯುತ ಸಹಬಾಳ್ವೆ ನಡೆಸಲು ಸರ್ಕಾರಿ ಅಧಿಕಾರಿಗಳು ಉತ್ತೇಜಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ಬಾಂಗ್ಲಾ ಅಲ್ಪಸಂಖ್ಯಾತರು ಅಸುರಕ್ಷಿತ: ಕಾಂಗ್ರೆಸ್ ಕಳವಳ

ನವದೆಹಲಿ: ಬಾಂಗ್ಲಾದೇಶದ ಇಸ್ಕಾನ್‌ ಸದಸ್ಯ ಚಿನ್ಮಯ ಕೃಷ್ಣದಾಸ ಬ್ರಹ್ಮಚಾರಿ ಬಂಧನ ಹಾಗೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಸುರಕ್ಷಿತ ವಾತಾವರಣ ಬಗ್ಗೆ ಕಾಂಗ್ರೆಸ್‌ ಬುಧವಾರ ತೀವ್ರ ಕಳವಳ ವ್ಯಕ್ತ ಪಡಿಸಿದೆ.ಈ ಕುರಿತು ಕಾಂಗ್ರೆಸ್‌ ಪ್ರಚಾರ ವಿಭಾಗದ ಅಧ್ಯಕ್ಷ ಪವನ್‌ ಖೇರಾ ಮಾತನಾಡಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತ ವಾತಾವರಣ ಎದುರಿಸುತ್ತಿದ್ದಾರೆ. ಆದ್ದರಿಂದ ಅವರ ಜೀವನ ಮತ್ತು ಆಸ್ತಿಯ ಸುರಕ್ಷತೆ ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಪಸಂಖ್ಯಾತರ ಪರಿಸ್ಥಿತಿ ಆತಂಕಕಾರಿ: ಬಾಂಗ್ಲಾ ಮಾಜಿ ಸಚಿವ

ಕೋಲ್ಕತಾ: ಪ್ರಸಕ್ತ ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಖಾತೆ ಮಾಜಿ ಸಚಿವ ಹಸನ್ ಮೊಹಮ್ಮದ್‌ ಹೇಳಿದ್ದಾರೆ. ದೇಶದಲ್ಲೀಗ ಜಮಾತ್‌ ಎ ಇಸ್ಲಾಮಿನಂಥ ಮತೀಯ ಸಂಘಟನೆಗಳು ಮುಂಚೂಣಿಗೆ ಬಂದಿದೆ. ಇದಕ್ಕೆ ಹಿಂದೂ ದೇಗುಲಗಳ ಮೇಲಿನ ಇತ್ತೀಚಿನ ದಾಳಿಗಳು ಉದಾಹರಣೆ. ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿ ದೇಶದಲ್ಲಿ ಹೆಚ್ಚುತ್ತಿದೆ. ಇದು ದೇಶದ ಜಾತ್ಯತೀತ ತತ್ವಗಳನ್ನು ಮೂಲೆಗೆ ಸರಿಸಿದೆ. ಜೊತೆಗೆ ಧಾರ್ಮಿಕ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಕಳವಳಕಾರಿ ಮಾಡಿದೆ ಎಂದು ಹಿಂದಿನ ಪ್ರಧಾನಿ ಶೇಖ್‌ ಹಸೀನಾ ಸಂಪುಟದಲ್ಲಿ ಸಚಿವರಾಗಿದ್ದ ಹಸನ್‌ ಹೇಳಿದ್ದಾರೆ.