ಸಾರಾಂಶ
ಬೀಜಿಂಗ್: 62 ವರ್ಷದ ವೃದ್ಧನೊಬ್ಬ ಜನರ ಗುಂಪಿನ ಮೇಲೆ ಭಾರೀ ವೇಗದಲ್ಲಿ ಕಾರು ನುಗ್ಗಿಸಿ 35 ಜನರನ್ನು ಬಲಿ ಪಡೆದ ಭೀಕರ ಘಟನೆಯೊಂದು ಚೀನಾದ ಝುಹೈನಲ್ಲಿ ನಡೆದಿದೆ. ಈ ಹಿಟ್ ಆ್ಯಂಡ್ ರನ್ ಘಟನೆ ಬಳಿಕ ಪರಾರಿಯಾಗಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಫ್ಯಾನ್ ಎಂಬ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ.
ಘಟನೆ ಆಕಸ್ಮಿಕವೋ ಅಥವಾ ದುಷ್ಕೃತ್ಯವೋ ಎಂಬುದು ಖಚಿತಪಟ್ಟಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಝುಹೈನಲ್ಲಿ ಅಂತಾರಾಷ್ಟ್ರೀಯ ಏರ್‌ಶೋ ನಡೆಯುತ್ತಿದ್ದ ಅದರ ಸಮೀಪದಲ್ಲೇ ಇರುವ ಕ್ರೀಡಾಂಗಣವೊಂದರ ಬಳಿ ನೂರಾರು ಜನರು ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಏಕಾಏಕಿ ಜನರ ಮೇಲೆ ನುಗ್ಗಿದೆ. ಈ ಅವಘಡದಲ್ಲಿ 35 ಜನರು ಸಾವನ್ನಪ್ಪಿ, 43 ಜನರು ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಾಳುಗಳಲ್ಲಿ ವೃದ್ಧರು ಮತ್ತು ಮಕ್ಕಳು ಕೂಡಾ ಸೇರಿದ್ದಾರೆ.ಘಟನೆ ಬಳಿಕ ಚಾಲಕ ಕಾರು ಸಮೇತ ಪರಾರಿಯಾಗಿ, ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಯತ್ನ ಮಾಡಿದ್ಧಾನೆ. ಆದರೆ ಸ್ಥಳೀಯರು ಆತನನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಫ್ಯಾನ್ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದು, ಬಳಿಕ ತನ್ನ ಪಾಲಿಗೆ ಬಂದ ಆಸ್ತಿ ಬಗ್ಗೆ ಆಕ್ರೋಶ ಹೊಂದಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.