ಸಾರಾಂಶ
ದುಬೈ ತೈಲ ಸಂಪದ್ಭರಿತ ಕುವೈತ್‌ನಲ್ಲಿ ಕಾರ್ಮಿಕರು ನೆಲೆಸಿದ್ದ ಬಹುಮಹಡಿ ಕಟ್ಟಡವೊಂದರಲ್ಲಿ ಅಗ್ನಿ ದುರಂತ ಸಂಭವಿಸಿ, 49 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕರು ಭಾರತೀಯರು. ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತ ಮೂಲದವರು.
ಎಲ್ಲರೂ 20ರಿಂದ 50 ವರ್ಷದೊಳಗಿನವರು ಎಂದು ವರದಿಗಳು ತಿಳಿಸಿವೆ.ಈ ನಡುವೆ, ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದು, ಆ ಪೈಕಿ 30 ಮಂದಿ ಭಾರತೀಯರು ಇದ್ದಾರೆ ಎಂದು ವರದಿಗಳು ಹೇಳಿವೆ.
ಭೀಕರ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದು, ಭಾರತೀಯರ ನೆರವಿಗೆ ಧಾವಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ವಿದೇಶಾಂಗ ಖಾತೆಯ ಮಾಜಿ ರಾಜ್ಯ ಖಾತೆ ಸಚಿವ ಜ.ವಿ.ಕೆ.ಸಿಂಗ್ ಅವರನ್ನು ಹೆಚ್ಚಿನ ನೆರವಿವಾಗಿ ಕುವೈತ್‌ಗೆ ಕಳುಹಿಸಿಕೊಟ್ಟಿದ್ದಾರೆ.ಏನಾಯ್ತು:ದಕ್ಷಿಣ ಕುವೈತ್‌ನ ಮಂಗಾಫ್ ಪ್ರದೇಶದಲ್ಲಿ ಆರು ಅಂತಸ್ತಿನ ಕಟ್ಟಡದಲ್ಲಿ ಸುಮಾರು 160 ಮಂದಿ ಕಾರ್ಮಿಕರು ನೆಲೆಸಿದ್ದರು.
ಬುಧವಾರ ನಸುಕಿನ ಜಾವ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಹುತೇಕ ಕಾರ್ಮಿಕರು ಮಲಗಿದ್ದಾಗ ವಿಷ ಗಾಳಿ ಸೇವಿಸಿ ಸಾವಿಗೀಡಾಗಿದ್ದಾರೆ. ಹಲವಾರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಇಲಾಖೆಯ ನಾಲ್ವರು ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ, ಭಾರತೀಯ ಕಾರ್ಮಿಕರ ಕುಟುಂಬದವರ ನೆರವಿಗಾಗಿ ಭಾರತೀಯ ರಾಯಭಾರ ಕಚೇರಿ ತುರ್ತು ಸಹಾಯವಾಣಿಯನ್ನು ತೆರೆದಿದೆ. +965-65505246 ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.ಕುವೈತ್‌ನ ಒಟ್ಟು ಜನಸಂಖ್ಯೆಯಲ್ಲಿ ಶೇ.21ರಷ್ಟು ಅಂದರೆ 10 ಲಕ್ಷ ಮಂದಿ ಭಾರತೀಯರು ಇದ್ದಾರೆ. ಕುವೈತ್‌ನ ಕಾರ್ಮಿಕ ವರ್ಗದಲ್ಲಿ ಶೇ.30ರಷ್ಟು ಅಂದರೆ, 9 ಲಕ್ಷದಷ್ಟು ಭಾರತೀಯರಿದ್ದಾರೆ.