ಸಾರಾಂಶ
ಟೋಕಿಯೋ: ದ್ವೀಪದೇಶ ಜಪಾನ್ ಸೋಮವಾರ ಸಂಭವಿಸಿದ ಭೀಕರ ಭೂಕಂಪದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ರಾಜಧಾನಿ ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದೆ. ಸೇನಾ ಮತ್ತು ಪ್ರಯಾಣಿಕ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, 379 ಜನರು ಪ್ರಯಾಣಿಸುತ್ತಿದ್ದ ನಾಗರಿಕ ವಿಮಾನ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್, ವಿಮಾನ ಪೂರ್ಣ ಸುಟ್ಟು ಭಸ್ಮವಾಗುವುದರೊಳಗೆ ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಆದರೆ ಸೇನೆಗೆ ಸೇರಿದ ಮತ್ತೊಂದು ವಿಮಾನದಲ್ಲಿದ್ದ 6 ಸಿಬ್ಬಂದಿ ಪೈಕಿ ಪೈಲಟ್ ಬಚಾವ್ ಆಗಿದ್ದರೆ, ಉಳಿದ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ.ಜಪಾನ್‌ನ ಅತ್ಯಂತ ಸಂಚಾರದಟ್ಟಣೆಯ ವಿಮಾನ ನಿಲ್ದಾಣಗಳ ಪೈಕಿ ಹನೆಡಾ ಕೂಡಾ ಒಂದಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರಯಾಣಿಕರು ಸಂಚರಿಸುವ ವೇಳೆಯೇ ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ.ಏನಾಯ್ತು?:ಜಪಾನ್ ಏರ್‌ಲೈನ್ಸ್‌ಗೆ ಸೇರಿದ ಜೆಎಎಲ್-516 ವಿಮಾನ ಮಂಗಳವಾರ ಮಧ್ಯಾಹ್ನದ ವೇಳೆಗೆ ಹೊಕೈಡೋದಿಂದ ಟೋಕಿಯೋದ ಹನೆಡಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಇದೇ ವೇಳೆ ಹನೆಡಾ ನಿಲ್ದಾಣದಲ್ಲಿದ್ದ ಕರಾವಳಿ ಕಾವಲು ಪಡೆಗೆ ಸೇರಿದ ವಿಮಾನವು, ಜಪಾನ್‌ನ ಭೂಕಂಪ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ಸಜ್ಜಾಗಿತ್ತು. ಹೀಗೆ ಎರಡು ವಿಮಾನಗಳು ಒಂದೇ ವೇಳೆಗೆ ರನ್‌ವೇಯಲ್ಲಿ ಸಂಚರಿಸಿದ ಕಾರಣ ಅಪಘಾತ ಸಂಭವಿಸಿದೆ.ಅಪಘಾತದ ತೀವ್ರತೆಗೆ ಜೆಎಎಲ್ ವಿಮಾನಕ್ಕೆ ತಕ್ಷಣವೇ ಬೆಂಕಿ ಹತ್ತಿಕೊಂಡಿದೆ. ಆದರೆ ವಿಮಾನದ ಸಿಬ್ಬಂದಿ ತಕ್ಷಣವೇ ವಿಮಾನದ ತುರ್ತು ದ್ವಾರಗಳನ್ನು ತೆರೆದ ಕಾರಣ, ವಿಮಾನದಲ್ಲಿ ಕಣ್ಣುಬಿಡಲಾಗದಷ್ಟು ಹೊಗೆ ತುಂಬಿಕೊಂಡಿದ್ದರೂ, ಎಲ್ಲರೂ ಸಿಬ್ಬಂದಿಗಳ ನೆರವಿನಿಂದ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ.ತಕ್ಷಣವೇ ನಿಲ್ದಾಣಕ್ಕೆ 70ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಕರೆಯಿಸಿ, ಬೆಂಕಿ ಆರಿಸುವ ಯತ್ನ ಮಾಡಲಾಯಿತಾದರೂ ಅದು ಫಲ ಕೊಡದೇ ಇಡೀ ವಿಮಾನ ಸುಟ್ಟು ಭಸ್ಮವಾಗಿದೆ. ಬೆಂಕಿಯ ತೀವ್ರತೆಗೆ ವಿಮಾನ 2 ತುಂಡಾಗಿದೆ.5 ಸಾವು:ಈ ನಡುವೆ ಕರಾವಳಿ ಕಾವಲು ಪಡೆಯ ವಿಮಾನದಲ್ಲಿದ್ದ ಪೈಲಟ್ ಅಪಘಾತದಲ್ಲಿ ಪಾರಾಗಿ ಜೀವ ಉಳಿಸಿಕೊಂಡಿದ್ದರೆ, ಉಳಿದ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ.