ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎಚ್ಐವಿ ಕೊನೆಗೊಳ್ಳುವ ಕಾಲ : ಏಡ್ಸ್‌ ರೋಗಕ್ಕೂ ಬಂತು ಲಸಿಕೆ!

| Published : Dec 03 2024, 12:35 AM IST / Updated: Dec 03 2024, 04:32 AM IST

ಸಾರಾಂಶ

ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎಚ್ಐವಿ ಏಡ್ಸ್‌ ಕೊನೆಗೊಳ್ಳುವ ಕಾಲ ಬಂದಿದೆಯೇ? ಹೌದು ಎಂದು ಔಷಧ ಕಂಪನಿಯೊಂದು ಹೇಳಿಕೊಂಡಿದ್ದು, ಇದಕ್ಕಾಗಿ ತಾನು ಲಸಿಕೆ ಸಿದ್ಧಪಡಿಸಿರುವುದಾಗಿ ಘೋಷಿಸಿದೆ.‘ಗಿಲಿಯಾಡ್‌’ ಎಂಬ ಅಮೆರಿಕದ ಫಾರ್ಮಾಸುಟಿಕಲ್‌ ಕಂಪನಿಯು ಈ ಲಸಿಕೆ ಸಿದ್ಧಪಡಿಸಿದೆ.

ಮೆಕ್ಸಿಕೋ ಸಿಟಿ: ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎಚ್ಐವಿ ಏಡ್ಸ್‌ ಕೊನೆಗೊಳ್ಳುವ ಕಾಲ ಬಂದಿದೆಯೇ? ಹೌದು ಎಂದು ಔಷಧ ಕಂಪನಿಯೊಂದು ಹೇಳಿಕೊಂಡಿದ್ದು, ಇದಕ್ಕಾಗಿ ತಾನು ಲಸಿಕೆ ಸಿದ್ಧಪಡಿಸಿರುವುದಾಗಿ ಘೋಷಿಸಿದೆ.‘ಗಿಲಿಯಾಡ್‌’ ಎಂಬ ಅಮೆರಿಕದ ಫಾರ್ಮಾಸುಟಿಕಲ್‌ ಕಂಪನಿಯು ಈ ಲಸಿಕೆ ಸಿದ್ಧಪಡಿಸಿದೆ. ಅಧ್ಯಯನದ ವೇಳೆ ವರ್ಷಕ್ಕೆ 2 ಡೋಸ್‌ ಲಸಿಕೆಗಳನ್ನು ತೆಗೆದುಕೊಂಡ ಮಹಿಳೆಯರು ಏಡ್ಸ್‌ ಸೋಂಕು ತಗುಲುವುದರಿಂದ ಬಚಾವಾಗಿದ್ದಾರೆ. ಪುರುಷರಲ್ಲೂ ಇದೇ ರೀತಿಯ ಫಲಿತಾಂಶಗಳು ಲಭಿಸಿವೆ ಎಂದು ಕಂಪನಿ ಹೇಳಿಕೊಂಡಿದೆ.

‘ಲೆನಾಕಾಪವಿರ್‌’ ಹೆಸರಿನ ಔಷಧಿಯನ್ನು ಈಗಾಗಲೇ ಅಮೆರಿಕ, ಕೆನಡಾ ಹಾಗೂ ಯುರೋಪ್‌ನಲ್ಲಿ ಎಚ್‌ಐವಿ ಸೋಂಕಿತರಿಗೆ ‘ಸುನೆಲೆಂಕಾ’ಬ್ರಾಂಡ್‌ ನೇಮ್‌ನಲ್ಲಿ ಔಷಧವನ್ನಾಗಿ ನೀಡಲಾಗುತ್ತಿದೆ. ಈಗ ಇದು ಎಚ್‌ಐವಿ ನಿರೋಧಕವಾಗಿಯೂ ಪ್ರಯೋಗದ ವೇಳೆ ಸಾಬೀತಾಗಿರುವ ಕಾರಣ, ಇದನ್ನು ಈಗ ಲಸಿಕೆಯ ರೂಪದಲ್ಲೂ ನೀಡಲು ಕಂಪನಿ ಯೋಚಿಸಿದ್ದು, ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆಯಲು ನಿರ್ಧರಿಸಿದೆ. ಏಡ್ಸ್‌ ಸೋಂಕು ಹೆಚ್ಚಿರುವ ಆಫ್ರಿಕಾ, ಆಗ್ನೇಯ ಏಷ್ಯಾ ಹಾಗೂ ಕೆರಿಬಿಯನ್‌ನಲ್ಲಿ ಮೊದಲು ಇದನ್ನು ನೀಡಲು ಉದ್ದೇಶಿಸಿದೆ ಎಂದು ‘ಅಸೋಸಿಯೇಟೆಡ್‌ ಪ್ರೆಸ್‌’ ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಏಡ್ಸ್‌ ವಿರೋಧಿ ವಿಭಾಗವಾದ ‘ಯುಎನ್‌ ಏಡ್ಸ್‌’, ‘ಇದುವರೆಗೆ ಲಭ್ಯ ಇರುವ ಏಡ್ಸ್ ತಡೆಗಟ್ಟುವಿಕೆಯ ಎಲ್ಲ ವಿಧಾನಗಳಲ್ಲಿ ಇದು ಅತ್ಯುತ್ತಮ ವಿಧಾನವಾಗಿದೆ’ ಎಂದಿದೆ.

ಕಳೆದ ವರ್ಷ ಏಡ್ಸ್‌ನಿಂದ 6.30 ಲಕ್ಷ ಜನ ವಿಶ್ವಾದ್ಯಂತ ಅಸುನೀಗಿದ್ದರು. ಇದು 2004ರ ನಂತರದ ಅತಿ ಕನಿಷ್ಠ ಸಾವಿನ ಸಂಖ್ಯೆ.