ಆಫ್ಘನ್‌ ಭೂಕಂಪ: ಸಾವಿನ ಸಂಖ್ಯೆ 1400ಕ್ಕೇರಿಕೆ

| Published : Sep 03 2025, 01:01 AM IST

ಸಾರಾಂಶ

: ಪೂರ್ವ ಅಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 1400ಕ್ಕೇರಿಯಾಗಿದೆ. 3000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬದುಕುಳಿದಿರಬಹುದಾದವರ ರಕ್ಷಣೆಗೆ ಹರಸಾಹಸ

ಜಲಾಲಾಬಾದ್‌: ಪೂರ್ವ ಅಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 1400ಕ್ಕೇರಿಯಾಗಿದೆ. 3000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬಹುತೇಕ ಮಣ್ಣು ಮತ್ತು ಮರ ಬಳಸಿ ನಿರ್ಮಿಸಲಾದ ಮನೆಗಳು ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆಗೆ ಪೂರ್ಣ ಕುಸಿದು ಬಿದ್ದಿವೆ. ಕಟ್ಟಡದೊಳಗೆ ಸಿಕ್ಕಿಹಾಕಿಕೊಂಡು ಬದುಕುಳಿದಿರಬಹುದಾದವರ ರಕ್ಷಣೆಗಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.ಆದರೆ ತಾಲಿಬಾನ್‌ ಆಡಳಿತ ಹೊಂದಿರುವ ಅಫ್ಗಾನಿಸ್ತಾನ ಸರ್ಕಾರದ ಜೊತೆಗೆ ಯಾವುದೇ ದೇಶಗಳು ನಂಟು ಹೊಂದಿರದ ಕಾರಣ, ವಿದೇಶಗಳ ನೆರವು ಮರೀಚಿಕೆಯಾಗಿಯೇ ಉಳಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಅಪಾಯವಿದೆ.

ಕಡಿದಾದ ಕಣಿವೆಯಲ್ಲಿ ವಾಸಿಸುತ್ತಿರುವ ಕುನಾರ್‌ ಪ್ರಾಂತ್ಯದಲ್ಲಿಯೇ ಹೆಚ್ಚಿನ ಅವಘಢ ಸಂಭವಿಸಿದೆ. ಇಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಸಿಬ್ಬಂದಿ ಬಳಸುತ್ತಿದ್ದಾರೆ. ಇನ್ನು ಭೂಕಂಪನ ಕಾರಣಕ್ಕೆ ಕೆಲವಡೆ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಂಗಳವಾರ ಮತ್ತೆ ತೆರೆಯಲಾಗಿದೆ. ಭೂಕಂಪ ವಿಪತ್ತಿಗೆ ಗುರಿಯಾಗಿರುವ ಆಫ್ಘನ್‌ಗೆ ಭಾರತ ಸೋಮವಾರವೇ ನೆರವು ಘೋಷಿಸಿದೆ. ಇದರ ಜತೆಗೆ ಅಮೆರಿಕ, ಚೀನಾ ಕೂಡ ನೆರವಿನ ಹಸ್ತ ಚಾಚಿದೆ.