ಜಪಾನ್‌, ಬ್ರಿಟನ್‌ ಬಳಿಕ ಜರ್ಮನಿಗೀಗ ರಿಸೆಷನ್‌

| Published : Feb 21 2024, 02:00 AM IST / Updated: Feb 21 2024, 07:47 AM IST

ಸಾರಾಂಶ

ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿತದ ಆತಂಕ ತೀವ್ರವಾಗಿ ಬಾಧಿಸತೊಡಗಿದೆ.

ಬರ್ಲಿನ್‌: ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿತದ ಆತಂಕ ತೀವ್ರವಾಗಿ ಬಾಧಿಸತೊಡಗಿದೆ. ಕಳೆದ ವಾರವಷ್ಟೇ ಬ್ರಿಟನ್‌ ಮತ್ತು ಜಪಾನ್‌ನಲ್ಲಿ ಆರ್ಥಿಕ ಹಿಂಜರಿತ ಕಂಡುಬಂದಿತ್ತು. 

ಇದರ ಬೆನ್ನಲ್ಲೇ ಯುರೋಪ್‌ನ ಮತ್ತೊಂದು ದೇಶ ಕೂಡ ಅದೇ ಹಾದಿ ಹಿಡಿದಿರುವಂತಿದೆ. 2023ರ ಕೊನೆಯ ತ್ರೈಮಾಸಿಕದಲ್ಲಿ ಶೇ.0.3ರಷ್ಟು ಕುಸಿತ ಕಂಡಿದ್ದ ಜರ್ಮನಿಯ ಜಿಡಿಪಿ, ಜನವರಿ- ಮಾರ್ಚ್‌ ನಡುವಣ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮತ್ತೊಮ್ಮೆ ಕುಂಠಿತವಾಗಬಹುದು ಎಂದು ದೇಶದ ಕೇಂದ್ರೀಯ ಬ್ಯಾಂಕ್‌ ಆಗಿರುವ ಬುಂಡೇಸ್‌ಬ್ಯಾಂಕ್‌ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.

ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಕುಂಠಿತವಾದರೆ ಜರ್ಮನಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ದೂಡಲ್ಪಡುತ್ತದೆ ಎಂದು ತಿಳಿಸಿದೆ.

ಗಮನಾರ್ಹ ಎಂದರೆ, ಕಳೆದ ವಾರವಷ್ಟೇ ಜಪಾನ್‌ ಅನ್ನು ಹಿಂದಿಕ್ಕಿ ಜರ್ಮನಿ ವಿಶ್ವದ 3ನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿತ್ತು.

2022ರಲ್ಲಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ತರುವಾಯ ಜರ್ಮನಿಯಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದರ ಜತೆಗೆ ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಇಳಿಮುಖವಾಗಿದೆ. 

ವಿದೇಶಗಳಿಂದ ಬೇಡಿಕೆ ಕಡಿಮೆಯಾಗಿ, ಗ್ರಾಹಕರ ವೆಚ್ಚ ತಗ್ಗಿ, ದೇಶೀಯ ಹೂಡಿಕೆ ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. 

ರೈಲು ಹಾಗೂ ವಿಮಾನಯಾನ ವಲಯ ಸೇರಿದಂತೆ ವಿವಿಧ ನೌಕರರು ಮುಷ್ಕರ ನಡೆಸಿದ್ದು ಕೂಡ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ಜರ್ಮನಿಯ ಕೇಂದ್ರೀಯ ಬ್ಯಾಂಕ್‌ ಹೇಳಿದೆ.