ಸಾರಾಂಶ
ಇಸ್ಲಾಮಾಬಾದ್ : ಅಕ್ರಮವಾಗಿ ವಿವಾಹ ಆದ ಆರೋಪ ಹೊತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ನ್ಯಾಯಾಲಯವೊಂದು ಶನಿವಾರ ಖುಲಾಸೆಗೊಳಿಸಿದೆ. ಕಳೆದ 1 ವರ್ಷದಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ವಿರುದ್ಧ ಇದ್ದ ಏಕೈಕ ಪ್ರಕರಣದಿಂದಲೂ ಅವರು ದೋಷಮುಕ್ತರಾಗಿದ್ದಾರೆ.
ಹೀಗಾಗಿ ಅವರು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.ಇಸ್ಲಾಮ್ ಪ್ರಕಾರ, ವಿವಾಹ ವಿಚ್ಛೇದನ ಅಥವಾ ಪತಿಯ ನಿಧನದ ನಾಲ್ಕು ತಿಂಗಳ ‘ಇದ್ದತ್’ ಅವಧಿಯಲ್ಲಿ ಮುಸ್ಲಿಂ ಮಹಿಳೆಯರು ಮರು ಮದುವೆಯಾಗುವಂತಿಲ್ಲ. ಆದಾಗ್ಯೂ ಇದ್ದತ್ ಅವಧಿಯಲ್ಲಿ ಬುಶ್ರಾ ಬೀಬಿ ಅವರು ಇಮ್ರಾನ್ ಖಾನ್ ಅವರನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿ ಬುಶ್ರಾ ಅವರ ಮಾಜಿ ಪತಿ ಖಾವರ್ ಫರೀದ್ ಮನೇಕಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದ್ದ ಫೆ.8ಕ್ಕೆ ಐದು ದಿನ ಮೊದಲು ಅಂದರೆ ಫೆ.3ರಂದು ಇಮ್ರಾನ್ ಖಾನ್ ಹಾಗೂ ದಂಪತಿಯನ್ನು ಇಸ್ಲಾಮಾಬಾದ್ ನ್ಯಾಯಾಲಯವೊಂದು ದೋಷಿ ಎಂದು ಪರಿಗಣಿಸಿತ್ತು. ಇದರ ವಿರುದ್ಧ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದಂಪತಿ ಮೇಲ್ಮನವಿ ಸಲ್ಲಿಸಿದ್ದರು. 71 ವರ್ಷದ ಇಮ್ರಾನ್ ಹಾಗೂ 49 ವರ್ಷದ ಬುಶ್ರಾ ಅವರನ್ನು ಕೋರ್ಟ್ ಖುಲಾಸೆಗೊಳಿಸಿ ಈಗ ತೀರ್ಪು ನೀಡಿದೆ.