ಸಾರಾಂಶ
ಚಂಡೀಗಢ: ಅಕ್ರಮವಾಗಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದ 116 ಮಂದಿ ಭಾರತೀಯ ವಲಸಿಗರನ್ನು ಹೊತ್ತ 2ನೇ ವಿಮಾನ ಪಂಜಾಬ್‌ನ ಅಮೃತಸರಕ್ಕೆ ಶನಿವಾರ ತಡರಾತ್ರಿ ಬಂದು ಇಳಿದಿದ್ದು, ಈ ಬಾರಿಯೂ ವಲಸಿಗರ ಕೈ ಕಾಲಿಗೆ ಕೋಳ ತೊಡಿಸಲಾಗಿತ್ತು ಎಂದು ತಿಳಿದುಬಂದಿದೆ.
ಮೊದಲ ಬಾರಿ ವಲಸಿಗರನ್ನು ಗಡೀಪಾರು ಮಾಡಿದಾಗ ಅವರ ಕೈಗೆ ಕೋಳ ಹಾಗೂ ಕಾಲಿಗೆ ಸರಪಳಿ ತೊಡಿಸಿದ್ದರ ವಿರುದ್ಧ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಸರ್ಕಾರವನ್ನು ಈ ವಿಷಯದಲ್ಲಿ ತರಾಟೆಗೆ ತೆಗೆದುಕೊಂಡಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ ಸರ್ಕಾರ, ಪ್ರತಿ ದೇಶವೂ ವಲಸಿಗರನ್ನು ಗಡೀಪಾರು ಮಾಡಲು ತನ್ನದೇ ಆದ ನೀತಿ ಹೊಂದಿದೆ. ಇದು ಹಿಂದಿನಿಂದಲೂ ನಡೆದುಬಂದ ಕ್ರಮ. ಆದರೂ ನಾವು ಭಾರತೀಯರನ್ನು ತವರಿಗೆ ಕಳುಹಿಸಿದ ರೀತಿ ಬಗ್ಗೆ ಅಮೆರಿಕ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸುತ್ತೇವೆ ಎಂದು ಹೇಳಿತ್ತು. ಜೊತೆಗೆ ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ವೇಳೆಯೂ ಈ ವಿಷಯ ಪ್ರಸ್ತಾಪವಾಗಿತ್ತು ಎನ್ನಲಾಗಿದೆ.
ಆದರೆ ಇದರ ಹೊರತಾಗಿಯೂ ಅಮೆರಿಕ ಮತ್ತದೇ ಕೆಲಸ ಮಾಡಿದೆ. ಈ ಬಗ್ಗೆ ಗಡೀಪಾರಾದವರಲ್ಲಿ ಒಬ್ಬರಾದ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ದಲ್ಜೀತ್ ಸಿಂಗ್ ಮಾತನಾಡಿ, ‘ನಮ್ಮ ಕಾಲಿಗೆ ಸರಪಳಿ ಹಾಕಲಾಗಿತ್ತು ಹಾಗೂ ಕೈಗಳಿಗೆ ಕೋಳ ತೊಡಿಸಲಾಗಿತ್ತು’ ಎಂದು ಹೇಳಿದ್ದಾರೆ. ಇತರೆ ಕೆಲವರು ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಭಾರತಕ್ಕೆ ಗಡೀಪಾರಾದ ಸಿಖ್ ನಾಗರಿಕರಿಗೆ ತಲೆಗೆ ಪೇಟಾ ತೊಡಲು ಅಮೆರಿಕ ಅವಕಾಶ ನೀಡಿಲ್ಲ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಫೆ.5ರಂದು ಮೊದಲ ವಿಮಾನದಲ್ಲಿ ಆಗಮಿಸಿದವರಿಗೂ ಅಮೆರಿಕದಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬರುವವರೆಗೂ ಇದೇ ರೀತಿ ನಡೆಸಿಕೊಳ್ಳಲಾಗಿತ್ತು. ಮಹಿಳೆಯರಿಗೆ ಮಾತ್ರ ವಿನಾಯ್ತಿ ನೀಡಲಾಗಿತ್ತು.
ಕಾಂಗ್ರೆಸ್ ಕಿಡಿ:
ಈ ನಡುವೆ ಭಾರತೀಯ ವಲಸಿಗರ ಕೈಗೆ ಕೋಳ ಹಾಕಿ ಕಳುಹಿಸುತ್ತಿರುವ ಬಗ್ಗೆ ಕಾಂಗ್ರೆಸ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್, ‘ಶನಿವಾರದ ಬೆಳವಣಿಗೆ ನೋಡಿದರೆ, ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ತಮ್ಮ ಆಪ್ತ ಸ್ನೇಹಿತ ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಕೈಗೆ ಕೋಳ ಹಾಕುತ್ತಿರುವುದರ ಬಗ್ಗೆ ತಮ್ಮ ವಿರೋಧ ತಿಳಿಸಿಲ್ಲ ಎಂದು ಸ್ಪಷ್ಟವಾಗಿದೆ’ ಎಂದು ಹೇಳಿದ್ಧಾರೆ.