50 ವರ್ಷದ ಬಳಿಕ ಹಾರಿದ್ದ ಅಮೆರಿಕದ ಖಾಸಗಿ ನೌಕೆ ಒಂದು ವಾರಗಳ ಕಾಲ ಚಂದ್ರನ ಅಂಗಳದಲ್ಲಿ ಕೆಲಸ ಮಾಡಿ ತನ್ನ ಕೆಲಸವನ್ನು ಸ್ತಬ್ಧಗೊಳಿಸಿದೆ.

ಕೇಪ್‌ ಕೆನವರೆಲ್‌: ಕಳೆದ 50 ವರ್ಷಗಳಲ್ಲೇ ಚಂದ್ರನ ಮೇಲಿಳಿದ ಅಮೆರಿಕದ ಮೊದಲ ನೌಕೆ ಎಂಬ ಹಿರಿಮೆಗೆ ಪಾತ್ರವಾಗಿದ್ದ ಒಡೆಸ್ಸಿಯಸ್‌ ಕೇವಲ ಒಂದು ವಾರದಲ್ಲೇ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಇನ್‌ಟ್ಯೂಟಿವ್‌ ಮಷಿನ್ಸ್‌ ಎಂಬ ಖಾಸಗಿ ಕಂಪನಿ ಹಾರಿಬಿಟ್ಟಿದ್ದ ಒಡೆಸ್ಸಿಯಸ್‌ ಎಂಬ ನೌಕೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಪೂರ್ಣವಾಗಿ ನಿರೀಕ್ಷಿತ ರೀತಿಯಲ್ಲಿ ಇಳಿಯದೇ ಇದ್ದರೂ, ಸುರಕ್ಷಿತವಾಗಿತ್ತು. 

ನಂತರದ ಒಂದು ವಾರದ ಅವಧಿಯಲ್ಲಿ ಒಂದಷ್ಟು ಫೋಟೋಗಳನ್ನು ಸೆರೆಹಿಡಿದು ಕಳುಹಿಸಿತ್ತು.

ಆದರೆ ಇದೀಗ ಚಂದ್ರನಲ್ಲಿ ರಾತ್ರಿಯ ಸಮಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನೌಕೆ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. 

ಒಂದು ವೇಳೆ ಚಂದ್ರನಲ್ಲಿನ ಅತ್ಯಂತ ಕನಿಷ್ಠ ಉಷ್ಣತೆಯನ್ನು ನೌಕೆ ತಡೆದುಕೊಂಡರೆ 2-3 ವಾರಗಳ ಬಳಿಕ ಮತ್ತೆ ಎದ್ದರೂ ಏಳಬಹುದು ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. 

ವಾಸ್ತವವಾಗಿ ನೌಕೆಯ ಜೀವಿತಾವಧಿ ನಾವು ಅಂದಿಕೊಂಡಿದ್ದೇ ಒಂದು ವಾರದ್ದು ಎಂದು ಕಂಪನಿ ಹೇಳಿಕೊಂಡಿದೆ. 

1972ರಲ್ಲಿ ಅಮೆರಿಕದ ನಾಸಾದ ಅಪೋಲೋ ಚಂದ್ರನ ಮೇಲೆ ಇಳಿದ ಬಳಿಕ ಅಲ್ಲಿಗೆ ಅಮೆರಿಕದ ಯಾವುದೇ ನೌಕೆಗಳು ಹೋಗಿರಲಿಲ್ಲ. 

ಇದೀಗ ಖಾಸಗಿ ಸಂಸ್ಥೆಯೊಂದು ನಾಸಾದ ಪರವಾಗಿ ತನ್ನ ನೌಕೆ ಹಾರಿಬಿಟ್ಟು 6 ಪ್ರಯೋಗಗಳನ್ನು ನಡೆಸಿತ್ತು.