ಸಾರಾಂಶ
ಬೈಡೆನ್‌ಗೆ ಆಂತರಿಕ ಚುನಾವಣೆಯಲ್ಲಿ ಗೆಲುವು ಲಭಿಸಿದೆ. ಮತ್ತೊಂದೆಡೆ ನಿಕ್ಕಿ ಹ್ಯಾಲೆ ಅಭ್ಯರ್ಥಿ ಪಟ್ಟಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಟ್ರಂಪ್‌ಗೂ ಜಯ ಲಭಿಸಿದೆ. ಈ ಮೂಲಕ 1956ರ ಬಳಿಕ ಮೊದಲ ಬಾರಿಗೆ 2 ಅವಧಿಯಲ್ಲಿ ಒಂದೇ ಜೋಡಿ ಮುಖಾಮುಖಿಯಾಗಲಿದೆ.
ವಾಷಿಂಗ್ಟನ್: ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಹಾಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ನಡೆದ ಆಂತರಿಕ ಚುನಾವಣೆಯಲ್ಲಿ ಬೈಡೆನ್ ಅಗತ್ಯ ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ನಾಮಾಂಕಿತರಾದರು.
ಇತ್ತ ರಿಪಬ್ಲಿಕನ್ ಪಕ್ಷದಲ್ಲಿ ಭಾರತೀಯ ಸಂಜಾತೆ ನಿಕ್ಕಿ ಹ್ಯಾಲೆ ಕಣದಿಂದ ಹಿಂದೆ ಸರಿದ ಬಳಿಕ ಡೊನಾಲ್ಡ್ ಟ್ರಂಪ್ ಕೂಡ ಪಕ್ಷದಲ್ಲಿ ಏಕಮೇವ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಮುಂಬರುವ ಆಗಸ್ಟ್‌ನಲ್ಲಿ ಅಧಿಕೃತವಾಗಿ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲಾಗುತ್ತದೆ.ಇದರೊಂದಿಗೆ 1956ರ ಬಳಿಕ ಸತತ ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದಿನ ಎದುರಾಳಿಗಳೇ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನ.5ರಂದು ನಡೆಯಲಿದೆ.