ಸಾರಾಂಶ
ವಾಷಿಂಗ್ಟನ್: ಅಮೆರಿಕದಲ್ಲಿರುವ ಭಾರತೀಯ ಮೂಲದ ಅಶ್ವಿನ್ ರಾಮಸ್ವಾಮಿ ಎಂಬ ಕೇವಲ 24 ವರ್ಷದ ಯುವಕ, ಅಮೆರಿಕದ ಜಾರ್ಜಿಯಾ ರಾಜ್ಯದ ಸೆನೆಟ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಶ್ವಿನ್ ಒಂದು ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಇಷ್ಟು ಕಿರಿಯ ವಯಸ್ಸಿನಲ್ಲಿ ಅಮೆರಿಕದ ಸೆನೆಟರ್ ಆದ ಮೊದಲ ಭಾರತೀಯ ಮೂಲದ ವ್ಯಕ್ತಿ ಹಾಗೂ ಅಮೆರಿಕದಲ್ಲಿ 1997 ರಿಂದ 2012ರ ನಡುವೆ ಜನಿಸಿದ ಝಡ್ ಜೆನರೇಷನ್‌ನ ಮೊದಲ ಸೆನೆಟರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಅಷ್ಟೇ ಅಲ್ಲದೇ ಕಂಪ್ಯೂಟರ್ ಸೈನ್ಸ್ ಹಾಗೂ ಕಾನೂನು ಎರಡೂ ಪದವಿಗಳನ್ನು ಹೊಂದಿರುವ ಜಾರ್ಜಿಯಾದ ಮೊದಲ ಸೆನೆಟರ್ ಆಗುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನ್ ‘ನನ್ನ ತಂದೆ ತಾಯಿ ಇಬ್ಬರೂ ತಮಿಳುನಾಡಿನಿಂದ 1990ರ ದಶಕದಲ್ಲಿ ಅಮೆರಿಕಕ್ಕೆ ಬಂದಿದ್ದರು. ನಾನು ಯಾವಾಗಲೂ ಭಾರತೀಯ ಸಂಸ್ಕೃತಿಯೊಂದಿಗೆ ಬೆಳೆದಿದ್ದೇನೆ.
ನಾನೊಬ್ಬ ಹಿಂದೂ. ನನ್ನ ಇಡೀ ಜೀವನದಲ್ಲಿ ನಾನು ಭಾರತೀಯ ಸಂಸ್ಕೃತಿ ತತ್ವಶಾಸ್ತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದೇನೆ’ ಎಂದಿದ್ದಾರೆ.ಅಲ್ಲದೇ ‘ಎಲ್ಲಾ ಸಂಗತಿಗಳು ನಡೆಯುವುದನ್ನು ನಾವು ನೋಡುತ್ತೇವೆ ಮತ್ತು ನಮಗಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಾವು ಬಯಸುತ್ತೇವೆ.
ಆದರೆ ನಮ್ಮಲ್ಲಿ ಸಂಪನ್ಮೂಲಗಳು ಅಥವಾ ಸಾಮರ್ಥ್ಯವಿಲ್ಲ ಎಂಬುದು ನಾವು ಎದುರಿಸುತ್ತಿರುವ ಒಂದು ಸಮಸ್ಯೆಯಾಗಿದೆ. ಏಕೆಂದರೆ ನನ್ನ ವಯಸ್ಸಿನ ಜನರು ಚುನಾಯಿತರಾಗುವುದು ನಿಜವಾಗಿಯೂ ಕಷ್ಟಕರವಾಗಿದೆ ಚುನಾವಣಾ ಪ್ರಕ್ರಿಯೆಯು ಶ್ರೀಮಂತ ಮತ್ತು ವಯಸ್ಕ ಜನರ ಕಡೆಗೆ ತಿರುಗುತ್ತದೆ.
ಇದೊಂದು ದೊಡ್ಡ ಸಮಸ್ಯೆಯಾಗಿದೆ. ಯಾವುದೇ ಹಿನ್ನೆಲೆ ಲೆಕ್ಕಿಸದೆ ಎಲ್ಲರೂ ಎಲ್ಲರಿಗೂ ಎಲ್ಲರಿಗೂ ಕೆಲಸ ಮಾಡಬಹುದು ಎಂಬುದನ್ನು ಈ ವಯಸ್ಸಿನಲ್ಲಿ ಯಶಸ್ವಿಯಾಗುವ ಮೂಲಕ ತೋರಿಸಲು ನಾನು ಭಾವಿಸುತ್ತೇನೆ’ ಎಂದಿದ್ದಾರೆ.