ಸಾರಾಂಶ
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲ್ಲೇ ಸೋಮವಾರ ಬಾಂಗ್ಲಾದೇಶದಲ್ಲಿ ದೇಶವ್ಯಾಪಿ ಭಾರೀ ಹಿಂಸಾಚಾರ ನಡೆದಿದೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಸಂಸದರು, ನಾಯಕರು, ಕಾರ್ಯಕರ್ತರನ್ನು ಗುರಿಯಾಗಿಸಿ ಪ್ರತಿಪಕ್ಷಗಳ ಕಾರ್ಯಕರ್ತರು, ಮತೀಯವಾದಿಗಳು ಭಾರೀ ಹಿಂಸಾಚಾರ ನಡೆಸಿದ್ದು, ಒಂದೇ ದಿನ 110ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ಹಿಂಸಾಚಾರದ ವೇಳೆ ಅವಾಮಿ ಲೀಗ್ ಪಕ್ಷದ ನಾಯಕರ ಹತ್ಯೆಗೈದು ಅವರನ್ನು ಸೇತುವೆಯ ಅಕ್ಕಪಕ್ಕ ತಲೆಕೆಳಗಾಗಿ ನೇತು ಹಾಕಿರುವ ಭೀಕರ ಘಟನೆ ನಡೆದಿದೆ. ಇನ್ನೊಂದು ಘಟನೆಯಲ್ಲಿ ಬಾಂಗ್ಲಾದ ಸಂಸದ ಎನ್ನಲಾದ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಸುಡಲಾದ ಎನ್ನಲಾದ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆಯಾದರೂ ಅದು ಖಚಿತಪಟ್ಟಿಲ್ಲ. ಇದು ಕೆಲ ವರ್ಷಗಳ ಹಿಂದೆ ಆಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡ ಬಳಿಕ ತಾಲಿಬಾನಿ ಉಗ್ರರು ನಡೆಸಿದ ವಿಕೃತಿಯನ್ನು ನೆನಪಿಸಿದೆ.ಅವಾಮಿ ಲೀಗ್ ಗುರಿ:
ಉದ್ಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಮೀಸಲು ನೀಡುವ ನೀತಿಯ ಪರವಾಗಿದ್ದ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಿಗೊಳಿಸುವಲ್ಲಿ ಯಶಸ್ವಿಯಾದ ಪ್ರತಿಭಟನಾಕಾರರು ಇದೀಗ ಅವರ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ.ಅವಾಮಿ ಲೀಗ್ ಪಕ್ಷದ ಕಚೇರಿ, ನಾಯಕರು, ಕಾರ್ಯಕರ್ತರ ಮನೆಗಳಿಗೆ, ಅವರಿಗೆ ಸೇರಿದ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದು ಅಲ್ಲದೆ ಅವುಗಳನ್ನು ಲೂಟಿ ಮಾಡಲಾಗಿದೆ. ಜೊತೆಗೆ ಹಲವು ಕಾರ್ಯಕರ್ತರನ್ನು ಹತ್ಯೆ ಮಾಡಿ ಸೇತುವೆಗಳಿಗೆ, ಕಟ್ಟಡಗಳಿಗೆ ನೇತು ಹಾಕಿದ ಭೀಕರ ದೃಶ್ಯಗಳು ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಸಾರಿಹೇಳಿವೆ. ಅವಾಮಿ ಲೀಗ್ ಪಕ್ಷದ ಸಂಸದ, ಮಾಜಿ ಕ್ರಿಕೆಟಿಗ ಮುಶ್ರಫೆ ಮೊರ್ತಜಾ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ.
ಅವಾಮಿ ಲೀಗ್ ಪಕ್ಷದ ನಾಯಕ ಶಾಹಿನ್‌ಗೆ ಸೇರಿದ ಜೆಸ್ಸೂರ್‌ನ ಹೋಟೆಲ್ ಒಂದಕ್ಕೆ ದುಷ್ಕರ್ಮಿಗಳು ಸೋಮವಾರ ಬೆಂಕಿ ಹಚ್ಚಿದ್ದು, ಕಟ್ಟಡವೊಂದರಲ್ಲೇ 24 ಜನರು ಸುಟ್ಟುಕರಕಾಗಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ಧಾರೆ.ದೇಶದಲ್ಲಿ ಇದೀಗ ಯಾವುದೇ ಸರ್ಕಾರ ಇಲ್ಲದೇ ಇರುವ ಕಾರಣ ಮತೀಯವಾದಿಗಳು, ದೇಶದ್ರೋಹಿ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ಹಿಂಸಾಚಾರ, ಲೂಟಿ, ಅಪಹರಣ, ಅತ್ಯಾಚಾರದಂಥ ಹೇಯ ಕೃತ್ಯಗಳಲ್ಲಿ ತೊಡಗಿವೆ.