ಸಾರಾಂಶ
ಢಾಕಾ: ದೇಶದ್ರೋಹ ಪ್ರಕರಣದಲ್ಲಿ ಬಂಧನವಾಗಿರುವ ಇಲ್ಲಿನ ಇಸ್ಕಾನ್ ಸದಸ್ಯ ಚಿನ್ಮಯ್ ಕೃಷ್ಣದಾಸ್ ಸೇರಿದಂತೆ 18 ಜನರ ಬ್ಯಾಂಕ್ ಖಾತೆಗಳನ್ನು 30 ದಿನಗಳ ಕಾಲ ಸ್ಥಗಿತಗೊಳಿಸುವಂತೆ ಬಾಂಗ್ಲಾ ಸರ್ಕಾರ ಶುಕ್ರವಾರ ಆದೇಶಿಸಿದೆ.
ಈ ಬಗ್ಗೆ ಬಾಂಗ್ಲಾದೇಶ ಬ್ಯಾಂಕ್ ಹಣಕಾಸು ಗುಪ್ತಚರ ಘಟಕ (ಬಿಎಫ್‌ಐಯು) ಗುರುವಾರ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನಿರ್ದೇಶನಗಳನ್ನು ಕಳುಹಿಸಿದ್ದು, ಈ ಖಾತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟುಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
ಅಲ್ಲದೆ ಈ ಖಾತೆಗಳಲ್ಲಿ ನಡೆದ ವಹಿವಾಟಿನ ಕುರಿತು 3 ದಿನಗಳಲ್ಲಿ ವರದಿ ನೀಡುವಂತೆಯೂ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಕೃಷ್ಣದಾಸ್ ಅವರನ್ನು ಕಳೆದ ಸೋಮವಾರ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ನಂತರ ಅವರನ್ನು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು, ಕೋರ್ಟ್ ಅವರನ್ನು ಜೈಲಿಗಟ್ಟಿದೆ.
ಅಲ್ಪಸಂಖ್ಯಾತರನ್ನು ರಕ್ಷಿಸಿ: ಬಾಂಗ್ಲಾಕ್ಕೆ ಭಾರತ ಒತ್ತಾಯ
ನವದೆಹಲಿ: ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಮಧ್ಯಂತರ ಸರ್ಕಾರವು ಬಾಂಗ್ಲಾ ದೇಶದಲ್ಲಿ ಎಲ್ಲ ಅಲ್ಪಸಂಖ್ಯಾತರನ್ನು ರಕ್ಷಿಸುವ ಕೆಲಸವನ್ನು ನಿರ್ವಹಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ‘ಭಾರತವು ಬಾಂಗ್ಲಾದೇಶದ ಸರ್ಕಾರದೊಂದಿಗೆ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಬೆದರಿಕೆಗಳು ಮತ್ತು ಉದ್ದೇಶಿತ ದಾಳಿಗಳನ್ನು ನಿರಂತರವಾಗಿ ಖಂಡಿಸಿದೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಮಧ್ಯಂತರ ಸರ್ಕಾರವು ಎಲ್ಲ ಅಲ್ಪಸಂಖ್ಯಾತರನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅಲ್ಪಸಂಖ್ಯಾತರ ರಕ್ಷಣೆಗಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಮತ್ತೊಮ್ಮೆ ಬಾಂಗ್ಲಾದೇಶಕ್ಕೆ ಕರೆ ನೀಡುತ್ತೇವೆ’ ಎಂದು ಹೇಳಿದರು.