ಸಾರಾಂಶ
20 ವರ್ಷಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ಉಗ್ರ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರ ರಜಾವುಲ್ಲಾ ನಿಝಾಮನಿ ಅಲಿಯಾಸ್ ಘಾಝಿ ಅಬು ಸೈಫುಲ್ಲಾನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ನವದೆಹಲಿ: 20 ವರ್ಷಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೇಲೆ ನಡೆದ ಉಗ್ರ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರ ರಜಾವುಲ್ಲಾ ನಿಝಾಮನಿ ಅಲಿಯಾಸ್ ಘಾಝಿ ಅಬು ಸೈಫುಲ್ಲಾನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಭಾರತಕ್ಕೆ ಬೇಕಾಗಿದ್ದ 26 ಉಗ್ರರು ಕಳೆದ 2 ವರ್ಷಗಳಿಂದ ಪಾಕಿಸ್ತಾನದಲ್ಲಿ ಅನಾಮಿಕರ ಗುಂಡಿಗೆ ದಾಳಿಗೆ ಬಲಿಯಾಗಿದ್ದರು. ಆ ಸಾಲಿಗೆ ಇದೀಗ 27ನೇ ವ್ಯಕ್ತಿಯಾಗಿ ರಜಾವುಲ್ಲಾ ಸೇರ್ಪಡೆಯಾಗಿದ್ದಾನೆ.
ಸ್ವತಃ ಪಾಕಿಸ್ತಾನ ಸೇನೆಯಿಂದ ಭದ್ರತೆ ಪಡೆದಿದ್ದ ರಜಾವುಲ್ಲಾ, ಭಾನುವಾರ ಮಧ್ಯಾಹ್ನ ಸಿಂಧ್ ಪ್ರಾಂತ್ಯದಲ್ಲಿರುವ ಮಾಟ್ಲಿಯಲ್ಲಿರುವ ತನ್ನ ಮನೆಯಿಂದ ಹೊರಬರುತ್ತಲೇ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಆತನನ್ನು ಹತೈಗೈದಿದ್ದಾರೆ.
ಈತ 2001ರಲ್ಲಿ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದ್ದ ಸಿಆರ್‌ಪಿಎಫ್ ಕಚೇರಿ ಮೇಲಿನ ದಾಳಿ, 2005ರಲ್ಲಿ ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ಮತ್ತು 2006ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್ಎಸ್ ಕಚೇರಿ ಮೇಲಿನ ದಾಳಿಯ ರೂವಾರಿ ಎಂದು ತನಿಖಾ ಸಂಸ್ಥೆಗಳು ಹೇಳಿದ್ದವು.
ಹಲವು ಹೆಸರು:
ವಿನೋದ್ ಕುಮಾರ್, ಮೊಹಮ್ಮದ್ ಸಲೀಂ, ಖಾಲಿದ್, ವಾನಿಯಲ್, ವಾಜಿದ್, ಸಲೀಂ ಭಾಯ್ ಸೇರಿ ಹಲವು ಹೆಸರುಗಳೊಂದಿಗೆ ಮೃತ ರಜಾವುಲ್ಲಾ ಗುರುತಿಸಿಕೊಂಡಿದ್ದ. ಈತ ಹಲವು ವರ್ಷಗಳಿಂದ ನೇಪಾಳದಲ್ಲಿ ಎಲ್‌ಇಟಿ ಉಗ್ರ ಸಂಘಟನೆಯ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಎಲ್‌ಇಟಿಗೆ ಉಗ್ರರನ್ನು ಪೂರೈಸುವ ಮತ್ತು ಹಣಕಾಸು ನೆರವನ್ನು ಒದಗಿಸುವ ಪ್ರಮುಖ ಹೊಣೆಗಾರಿಕೆ ನಿಭಾಯಿಸುತ್ತಿದ್ದ. ನೇಪಾಳ ಮೂಲಕ ಎಲ್‌ಇಟಿ ಉಗ್ರರು ಭಾರತದೊಳಗೆ ನುಸುಳಲು ನೆರವು ನೀಡಿದ್ದ.
ಎಲ್‌ಇಟಿ ಪ್ರಮುಖ ಛೀಮಾನ ಬಂಟ:
ಎಲ್‌ಇಟಿ ಕಾರ್ಯಾಚರಣೆಯ ಕಮಾಂಡರ್ ಅಜಂ ಛೀಮಾ ಅಲಿಯಾಸ್ ಬಾಬಾಜಿಯ ಪ್ರಮುಖ ಬಂಟರಲ್ಲಿ ಒಬ್ಬನಾಗಿದ್ದ ಸೈಫುಲ್ಲಾ, ನೇಪಾಳದಲ್ಲಿ ವಿನೋದ್ ಕುಮಾರ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ. ಅಲ್ಲಿನ ಸ್ಥಳೀಯ ಯುವತಿ ನಗ್ಮಾ ಬಾನು ಎಂಬಾಕೆಯನ್ನು ಮದುವೆಯೂ ಆಗಿದ್ದ.
ಸಿಂಧ್ ಪ್ರಾಂತ್ಯದ ಮಾಲ್ಟಿಯಲ್ಲಿ ಉಳಿದುಕೊಂಡಿದ್ದ ಈತ, ಎಲ್‌ಇಟಿ ಸಂಘಟನೆಯ ಉಗ್ರರ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ. ಮುಖ್ಯವಾಗಿ ನೇಪಾಳದಿಂದ ಉಗ್ರ ಸಂಘಟನೆಗೆ ಜನರನ್ನು ನೇಮಿಸುವ, ಹಣಕಾಸು ನೆರವು ಒದಗಿಸುವ, ಶಸ್ತ್ರಾಸ್ತ್ರಗಳ ಸಾಗಣೆ ಮತ್ತು ನೇಪಾಳ-ಭಾರತ ಗಡಿ ಮೂಲಕ ನಡೆಯುವ ಉಗ್ರ ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದ.
ಯಾವ್ಯಾವ ಕೇಸಲ್ಲಿ ಭಾಗಿ2001ರಾಂಪುರ ಸಿಆರ್‌ಪಿಎಫ್ ಕಚೇರಿ2005ಬೆಂಗಳೂರಿನ ಐಐಎಸ್‌ಸಿ ಕಚೇರಿ2006ನಾಗಪುರದ ಆರ್‌ಎಸ್‌ಎಸ್ ಕಚೇರಿ
ಹತ್ಯೆಯಾಗಿದ್ದು ಹೇಗೆ?- ಪಾಕಿಸ್ತಾನ ಸೇನೆಯಿಂದ ಅಬು ಸೈಫುಲ್ಲಾಗೆ ಅತ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು- ಭಾನುವಾರ ಮಧ್ಯಾಹ್ನ ಸಿಂಧ್ ಪ್ರಾಂತ್ಯದ ಮಾಟ್ಲಿಯಲ್ಲಿರುವ ತನ್ನ ಮನೆಯಿಂದ ಹೊರಬಂದಿದ್ದ- ಈ ವೇಳೆ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ. ಕುಸಿದು ಬಿದ್ದು, ನರಳಾಡಿ ಸೈಫುಲ್ಲಾ ಸಾವು- ಗುಂಡೇಟು ಬಳಿಕ ಸೈಫುಲ್ಲಾ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವ ವಿಡಿಯೋಗಳು ವೈರಲ್
2005ರಲ್ಲಿ ನಡೆದಿತ್ತು
ಐಐಎಸ್‌ಸಿ ದಾಳಿ2005ರ ಡಿ.28ರಂದು ಬೆಂಗಳೂರಿನ ಐಐಎಸ್‌ಸಿಗೆ ಸೇನಾ ಸಮವಸ್ತ್ರದಲ್ಲಿ ನುಗ್ಗಿದ ಉಗ್ರರು ಸಂಜೆ 7 ಗಂಟೆ ಸುಮಾರಿಗೆ ಏಕಾಏಕಿ ಗುಂಡಿನ ದಾಳಿ ನಡೆಸಿ ದೆಹಲಿ ಐಐಟಿಯ ಪ್ರೊ.ಮುನಿಷ್ ಚಂದ್ರ ಪುರಿ ಅವರ ಹತ್ಯೆ ಮಾಡಿದ್ದರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಮೊಹಮ್ಮದ್ ರಝಾ ಉಲ್ ರೆಹಮಾನ್, ಅಫ್ಜಲ್ ಪಾಷಾ, ಮೆಹಬೂಬ್ ಇಬ್ರಾಹಿಂ, ಮಿರುದ್ದೀನ್ ಖಾನ್, ನಿಜಾಮುದ್ದೀನ್, ಮುನ್ನಾ, ಹಬೀಬ್ ಮಿಯಾ ಎಂಬವರನ್ನು ಬಂಧಿಸಲಾಗಿತ್ತು.