ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಸಂದೇಶದ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮೆಚ್ಚುಗೆ

| Published : Aug 28 2024, 12:45 AM IST / Updated: Aug 28 2024, 08:53 AM IST

ಸಾರಾಂಶ

: ಸಂಘರ್ಷ ಕೊನೆಗಾಣಿಸಲು ರಷ್ಯಾ ಮತ್ತು ಉಕ್ರೇನ್‌ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು. ಆದಷ್ಟು ಶೀಘ್ರ ಶಾಂತಿ ಮರುಸ್ಥಾಪನೆಗೆ ಉಭಯ ದೇಶಗಳು ಮುಂದಾಗಬೇಕು ಎಂಬ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಸಂದೇಶದ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್‌: ಸಂಘರ್ಷ ಕೊನೆಗಾಣಿಸಲು ರಷ್ಯಾ ಮತ್ತು ಉಕ್ರೇನ್‌ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು. ಆದಷ್ಟು ಶೀಘ್ರ ಶಾಂತಿ ಮರುಸ್ಥಾಪನೆಗೆ ಉಭಯ ದೇಶಗಳು ಮುಂದಾಗಬೇಕು ಎಂಬ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಸಂದೇಶದ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೋಲೆಂಡ್‌, ಉಕ್ರೇನ್‌ ಪ್ರವಾಸ ಮುಗಿದ ಬಂದ ಬೆನ್ನಲ್ಲೇ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖುದ್ದು ದೂರವಾಣಿ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಈ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಉಕ್ರೇನ್‌ಗೆ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯ ಕಾರ್ಯಕೈಗೊಂಡ ಭಾರತದ ಬಗ್ಗೆ ಪ್ರಶಂಸೆಯ ಮಾತುಗಳನ್ನೂ ಆಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬೈಡೆನ್‌ ‘ ಇತ್ತೀಚಿನ ಪೋಲೆಂಡ್‌, ಉಕ್ರೇನ್‌ ಭೇಟಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದೆ ಮತ್ತು ಅವರ ಶಾಂತಿಯ ಸಂದೇಶ ಹಾಗೂ ಮಾನವೀಯ ನೆರವಿಗಾಗಿ ಪ್ರಶಂಸೆ ವ್ಯಕ್ತಪಡಿಸಿದೆ. ಇದೇ ವೇಳೆ ಇಂಡೋ- ಪೆಸಿಫಿಕ್‌ ವಲಯದಲ್ಲಿ ಶಾಂತಿಗಾಗಿ ಒಂದಾಗಿ ಶ್ರಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಕೆಲ ಸಮಯದ ಹಿಂದೆ ರಷ್ಯಾಕ್ಕೆ ಭೇಟಿ ನೀಡಿದ ವೇಳೆಯೂ ಯುದ್ಧ ಸ್ಥಗಿತಗೊಳಿಸಿ ಶಾಂತಿ ಮರುಸ್ಥಾಪನೆಯ ಮಾತುಗಳನ್ನು ಆಡಿದ್ದರು. ಅದಾದ ಬೆನ್ನಲ್ಲೇ ಉಕ್ರೇನ್‌ಗೂ ಭೇಟಿ ನೀಡಿ ಇದೇ ಮಾತುಗಳನ್ನು ಆಡಿದ್ದರು. ಈ ಎರಡೂ ಭೇಟಿಯ ಬಳಿಕ ಬೈಡೆನ್‌ ಮತ್ತು ಮೋದಿ ನಡುವಿನ ಮೊದಲ ಮಾತುಕತೆ ಇದಾಗಿತ್ತು.