ಸಾರಾಂಶ
ವಾಷಿಂಗ್ಟನ್ : ಅಮೆರಿಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಖರೀದಿ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿ ಜೈಲು ಭೀತಿ ಎದುರಿಸುತ್ತಿದ್ದ ಹಂಟರ್ ಬೈಡೆನ್‌ಗೆ ಆತನ ತಂದೆ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕ್ಷಮಾದಾನ ನೀಡಿದ್ದಾರೆ.
‘ನಾನು ನನ್ನ ಮಗ ಎಂದು ಕ್ಷಮಾದಾನ ನೀಡುತ್ತಿಲ್ಲ. ಆದರೆ ಆತನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂಬ ಕಾರಣಕ್ಕೆ ಕ್ಷಮಾದಾನ ನೀಡುತ್ತಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜನವರಿಯಲ್ಲಿ ಅಧ್ಯಕ್ಷಗಿರಿ ಬಿಡುತ್ತಿರುವ ಬೈಡೆನ್‌ರ ಈ ಕೊನೇ ಕ್ಷಣದ ನಡೆ ಅಚ್ಚರಿ ಮೂಡಿಸಿದೆ ಹಾಗೂ ಪುತ್ರವ್ಯಾಮೋಹದ ಟೀಕೆ ಕೇಳಿಬಂದಿದೆ.
ಆರೋಪ ಏನಿತ್ತು?:
ಹಂಟರ್ ಬೈಡೆನ್ ಅಕ್ರಮವಾಗಿ 2018ರಲ್ಲಿ ಗನ್ ಖರೀದಿಸಿದ್ದ ಎಂಬುದು ಮೊದಲ ಆರೋಪ. ಇನ್ನು 1.4 ದಶಲಕ್ಷ ಡಾಲರ್ ತೆರಿಗೆಯನ್ನು ಕಟ್ಟದೇ ವಂಚಿಸಿದ್ದ ಎಂಬುದು ಎರಡನೇ ಆರೋಪ. ತೆರಿಗೆ ವಂಚನೆ ಆರೋಪಕ್ಕೆ ಆತನಿಗೆ 17 ವರ್ಷ ಹಾಗೂ ಗನ್ ಪ್ರಕರಣದಲ್ಲಿ 25 ವರ್ಷ ಜೈಲುಶಿಕ್ಷೆ ಆಗುವ ಸಾಧ್ಯತೆ ಇತ್ತು.
2025ರ ಆರಂಭದಲ್ಲಿ ಪುಟಿನ್ ಭಾರತಕ್ಕೆ: ರಷ್ಯಾ ಅಧಿಕೃತ ಹೇಳಿಕೆ
ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2025ರ ಪ್ರಾರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಷ್ಯಾ ಅಧಿಕೃತ ಹೇಳಿಕೆ ನೀಡಿದೆ.ಸೋಮವಾರ ಮಾಹಿತಿ ನೀಡಿದ ರಷ್ಯಾ ಸರ್ಕಾರದ ವಕ್ತಾರ ಯೂರಿ ಉಷಕೋವ್, ಮುಂದಿನ ವರ್ಷದ ಆರಂಭದಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಉಭಯ ನಾಯಕರ ನಡುವಿನ ವಾರ್ಷಿಕ ಸಭೆಯ ಬದ್ಧತೆಯ ಭಾಗವಾಗಿ ಪುಟಿನ್ ಭೇಟಿಯನ್ನು ಯೋಜಿಸಲಾಗಿದೆ ಎಂದರು.
ವರ್ಷಕ್ಕೊಮ್ಮೆ ಸಭೆ ಸೇರುವ ಬಗ್ಗೆ ರಷ್ಯಾ-ಭಾರತ ಒಪ್ಪಂದ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಷ್ಯಾಗೆ ಭೇಟಿ ಕೊಟ್ಟ ಮೋದಿ ಅವರು ಪುಟಿನ್ ಅವರನ್ನು ಭಾರತಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದರು.