ಸಾರಾಂಶ
ವಾಷಿಂಗ್ಟನ್: ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಂದು ಅವಧಿಗೆ ಡೆಮಾಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ವಯಸ್ಸಾಗಿದೆ, ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ ಎಂಬ ವರದಿಗಳ ನಡುವೆಯೇ ಇನ್ನೊಂದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಸ್ವತಃ ಬೈಡೆನ್ ಅವರೇ ತಮ್ಮ ಪಕ್ಷದ ಗವರ್ನರ್‌ಗಳ ಸಭೆಯಲ್ಲಿ ‘ನನಗೆ ಹೆಚ್ಚು ನಿದ್ದೆಯ ಅಗತ್ಯವಿದೆ. ಹೀಗಾಗಿ ಕಡಿಮೆ ಅವಧಿಗೆ ಕೆಲಸ ಮಾಡುತ್ತೇನೆ. ರಾತ್ರಿ 8ರ ಬಳಿಕ ಯಾವುದೇ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಹೇಳಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
‘ಆದರೆ ನಾನು ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿಯುವುದಿಲ್ಲ. ಇತ್ತೀಚೆಗೆ ಕೆಲ ಸಂದರ್ಭಗಳಲ್ಲಿ ಉಂಟಾದ ಗೊಂದಲಕ್ಕೆ ಅತಿಯಾದ ವಿದೇಶ ಪ್ರವಾಸಗಳು ಕಾರಣ. ಸಲಹೆಗಾರರು ಬೇಡ ಅಂದರೂ ಹೆಚ್ಚು ಕೆಲಸದ ಒತ್ತಡವನ್ನು ಮೈಮೇಲೆ ಎಳೆದುಕೊಂಡಿದ್ದೆ. ಈಗ ನನಗೆ ಜಾಸ್ತಿ ವಿಶ್ರಾಂತಿ ಬೇಕು ಅನ್ನಿಸಿದೆ. ವಿಶೇಷವಾಗಿ ತಡರಾತ್ರಿಯ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ. ಇದೇ ವೇಳೆ ಅವರು ‘ಐ ಆ್ಯಮ್ ಫೈನ್. ಆದರೆ ನನ್ನ ಮೆದುಳಿನ ಬಗ್ಗೆ ಗೊತ್ತಿಲ್ಲ’ ಎಂದು ಜೋಕ್ ಮಾಡಿದರು ಎಂದೂ ಹೇಳಲಾಗಿದೆ.
ಸಭೆಯಲ್ಲಿ ಯಾವುದೇ ಗವರ್ನರ್‌ಗಳು ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ನೇರವಾಗಿ ಹೇಳಲಿಲ್ಲ ಎಂದು ವರದಿಯಾಗಿದೆ.