ಸಾರಾಂಶ
ನವದೆಹಲಿ: ಖಲಿಸ್ತಾನಿಗಳ ವಿಷಯದಲ್ಲಿ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಿರುವ ಕೆನಡಾ ಇದೀಗ ತನ್ನ ದೇಶದಲ್ಲಿ ಜಾರಿಯಲ್ಲಿದ್ದ ಮತ್ತು ವಿದೇಶಿ ವಿದ್ಯಾರ್ಥಿಗಳ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ವಿದ್ಯಾರ್ಥಿ ವೀಸಾ (ಸ್ಟೂಡಂಟ್ ವೀಸಾ) ಯೋಜನೆಯನ್ನು ರದ್ದುಪಡಿಸಿದೆ. ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಸುಮಾರು ಶೇ.50ರಷ್ಟು ವಿದ್ಯಾರ್ಥಿಗಳು ಭಾರತೀಯರೇ ಆಗಿರುವುದರಿಂದ ಇದು ಭಾರತದ ವಿರುದ್ಧ ಪ್ರತೀಕಾರದ ಕ್ರಮ ಎಂದು ವ್ಯಾಖ್ಯಾನಿಸಲಾಗಿದೆ.
ಭಾರತ, ಬ್ರೆಜಿಲ್, ಚೀನಾ, ಕೋಲಂಬಿಯಾ, ಪಾಕಿಸ್ತಾನ ಸೇರಿದಂತೆ ಒಟ್ಟು 14 ದೇಶಗಳ ವಿದ್ಯಾರ್ಥಿಗಳಿಗೆ ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡಲು ತ್ವರಿತವಾಗಿ ಅನುಮತಿ ನೀಡುವ ‘ಸ್ಟೂಡೆಂಟ್ ಡೈರೆಕ್ಟ್ ಸ್ಕೀಮ್’ ಎಂಬ ಯೋಜನೆಯನ್ನು 2018ರಲ್ಲಿ ಜಾರಿಗೆ ತರಲಾಗಿತ್ತು. ಅದನ್ನೀಗ ರದ್ದುಪಡಿಸಿರುವುದಾಗಿ ಕೆನಡಾ ಸರ್ಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ನ.8ರ ಮಧ್ಯಾಹ್ನ 2 ಗಂಟೆಯವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾತ್ರ ಈ ಯೋಜನೆಯಡಿ ಪರಿಗಣಿಸಲಾಗುತ್ತದೆ. ನಂತರ ಸಲ್ಲಿಕೆಯಾದ ಅರ್ಜಿಗಳನ್ನು ಸಾಮಾನ್ಯ ‘ಸ್ಟಡಿ ಪರ್ಮಿಟ್’ ಪ್ರಕ್ರಿಯೆಯಡಿ ಪರಿಗಣಿಸಲಾಗುತ್ತದೆ ಎಂದು ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ.
6 ಲಕ್ಷ ಭಾರತೀಯ ವಿದ್ಯಾರ್ಥಿಗಳು:
ಸಾಮಾನ್ಯ ಸ್ಟಡಿ ಪರ್ಮಿಟ್ ಅಡಿ ಅರ್ಜಿ ಸಲ್ಲಿಸಿ ಕೆನಡಾದ ವೀಸಾ ಪಡೆಯುವುದು ಸುದೀರ್ಘ ಪ್ರಕ್ರಿಯೆಯಾಗುತ್ತದೆ. ಹೀಗಾಗಿ ಇನ್ನು ಮುಂದೆ ಕೆನಡಾಕ್ಕೆ ಉನ್ನತ ವ್ಯಾಸಂಗಕ್ಕೆಂದು ತೆರಳುವವರು ಮರುಯೋಚನೆ ಮಾಡುವಂತಾಗಿದೆ.
‘ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡಲು ಹಾಗೂ ವಿದ್ಯಾರ್ಥಿ ಪ್ರವೇಶ ಯೋಜನೆಯನ್ನು ಬಲಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೆನಡಾ ಹೇಳಿದೆ. ಕೆನಡಾದಲ್ಲಿ ಪ್ರಸ್ತುತ 6 ಲಕ್ಷದಷ್ಟು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಲಸಿಗರ ಬಗ್ಗೆ ಆಕ್ರೋಶ:
ಅಮೆರಿಕದಂತೆ ಕೆನಡಾದಲ್ಲೂ ವಲಸಿಗರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ನಾಗರಿಕರಲ್ಲಿ ಆಕ್ರೋಶವಿದೆ. ವಲಸಿಗರಿಂದಾಗಿ ದೇಶದಲ್ಲಿ ವಸತಿ ಸಮಸ್ಯೆ, ಜೀವನ ನಿರ್ವಹಣೆ ವೆಚ್ಚ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆ ಹೀಗೆ ನಾನಾ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ದೂರುಗಳಿವೆ. ಕೆನಡಾದ ರಾಜಕೀಯ ವಲಯದಲ್ಲೂ ಆಡಳಿತಾರೂಢ ಜಸ್ಟಿನ್ ಟ್ರುಡೋ ಅವರ ಪಕ್ಷವನ್ನು ವಿರೋಧಿಸಲು ಈ ಕಾರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ವರ್ಷ ಕೆನಡಾದಲ್ಲಿ ಚುನಾವಣೆ ನಡೆಯಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಕೆನಡಾ ‘ಸ್ಟೂಡೆಂಟ್ ಡೈರೆಕ್ಟ್ ಸ್ಕೀಮ್’ ರದ್ದುಪಡಿಸಿದೆ ಎಂದು ಹೇಳಲಾಗುತ್ತಿದೆ.