ಪಾಕಿಸ್ತಾನದ ಮೇಲೆ 27 ಲಕ್ಷ ಕೋಟಿ ರೂ. ಸಾಲದ ಬರೆ! ಈ ಮೊತ್ತ ದೇಶದ ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹಕ್ಕಿಂತ ಹತ್ತು ಪಟ್ಟು

| Published : Sep 21 2024, 01:46 AM IST / Updated: Sep 21 2024, 04:20 AM IST

ಸಾರಾಂಶ

ಮುಂದಿನ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನವು 27 ಲಕ್ಷ ಕೋಟಿ ರೂಪಾಯಿಗಳಷ್ಟು ಬಾಹ್ಯ ಸಾಲವನ್ನು ಮರುಪಾವತಿಸಬೇಕಿದೆ. ಈ ಮೊತ್ತವು ದೇಶದ ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದ್ದು, ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಕಳವಳಕಾರಿ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಇಸ್ಲಾಮಾಬಾದ್‌: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ, ಮುಂದಿನ 4 ವರ್ಷಗಳಲ್ಲಿ 27 ಲಕ್ಷ ಕೋಟಿ ರುಪಾಯಿ (1 ಡಾಲರ್‌ಗೆ 278 ಪಾಕ್‌ ರುಪಾಯಿ) ಬಾಹ್ಯ ಸಾಲ ಮರುಪಾವತಿಸಬೇಕಾದ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ಈ ಬಾಹ್ಯ ಸಾಲ, ಪಾಕಿಸ್ತಾನದ ಹಾಲಿ ವಿದೇಶಿ ವಿನಿಮಯ ಸಂಗ್ರಹದ 10 ಪಟ್ಟು ಇದೆ ಎಂಬುದೇ ಪಾಕಿಸ್ತಾನದ ದಯನೀಯ ಆರ್ಥಿಕ ಪರಿಸ್ಥಿತಿಯನ್ನು ಅನಾವರಣ ಮಾಡಿದೆ.

ದೇಶದ ಇಂಥ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ವತಃ ಹಣಕಾಸು ಖಾತೆ ರಾಜ್ಯ ಸಚಿವ ಪರ್ವೇಜ್‌ ಮಲಿಕ್‌ ಅವರೇ ಸಂಸತ್ತಿನ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದಾರೆ. 2024ರಿಂದ 2027ರ ಅವಧಿಯಲ್ಲಿ ದೇಶ 100 ಶತಕೋಟಿ ಡಾಲರ್‌ (27 ಲಕ್ಷ ಕೋಟಿ ರುಪಾಯಿ) ಬಾಹ್ಯ ಸಾಲ ತೀರಿಸಬೇಕಿದೆ. ಹಾಲಿ ಇರುವ ಸಾಲಗಳನ್ನು ನವೀಕರಿಸುವ ಮೂಲಕ ಅಥವಾ ಹೊಸ ಸಾಲದ ಮೂಲಕ ಹಿಂದಿನ ಸಾಲ ತೀರಿಸಬಹುದು ಎಂದು ಸಮಸ್ಯೆಗೆ ಪರಿಹಾರವನ್ನೂ ನೀಡಿದ್ದಾರೆ.

ಆದರೆ ಈಗಾಗಲೇ ಹಳೆಯ ಸಾಲಗಳ ಮರುಪಾವತಿಗೆ ಪಾಕಿಸ್ತಾನ ಹಲವು ವರ್ಷಗಳಿಂದ ಇದೇ ನೀತಿ ಅನುಸರಿಸುತ್ತಿರುವ ಕಾರಣ, ವಿಶ್ವಬ್ಯಾಂಕ್‌ ಸೇರಿದಂತೆ ಹಲವು ವಿದೇಶಿ ಮೂಲಗಳ ಸಾಲ ಪಡೆಯುವುದು ಪಾಕ್‌ ಪಾಲಿಗೆ ಕಷ್ಟವಾಗಿದೆ. ಅಂಥದ್ದರಲ್ಲಿ ಮತ್ತೆ ಹಳೆಯ ನೀತಿಗೆ ಮೊರೆ ಹೋಗುವ ಬಗ್ಗೆ ಪಾಕ್‌ ಸರ್ಕಾರ ಮಾತನಾಡಿದೆ. ಪಾಕಿಸ್ತಾನ ಪ್ರಮುಖವಾಗಿ ಸೌದಿ ಅರೇಬಿಯಾ, ಚೀನಾ, ಯುಎಇ, ಕುವೈತ್‌ ದೇಶಗಳಿಂದ ಸಾಲ ಪಡೆದಿದೆ.