ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ವಿಡಿಯೋ ಬೆಳಕಿಗೆ

| Published : Mar 10 2024, 01:46 AM IST

ಸಾರಾಂಶ

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ವಿಡಿಯೋ ಬೆಳಕಿಗೆ ಬಂದಿದ್ದು, ನಿಜ್ಜರ್‌ಗೆ ಇಬ್ಬರು ಗುಂಡಿಕ್ಕಿ ಪರಾರಿ ಆಗುವ ದೃಶ್ಯವನ್ನು ಸಿಬಿಸಿ ನ್ಯೂಸ್‌ನಿಂದ ಬಿಡುಗಡೆ ಮಾಡಿದೆ. ಹತ್ಯೆ ಹಿಂದೆ ತಾನಿಲ್ಲ ಎಂಬ ಭಾರತದ ವಾದಕ್ಕೆ ಪುಷ್ಟಿ ಬಂದಿದೆ.

ಟೊರೊಂಟೊ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ಹದಗೆಡಲು ಮೂಲ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಮಹತ್ವದ ವಿಡಿಯೋ ಬೆಳಕಿಗೆ ಬಂದಿದ್ದು, ವೈರಲ್‌ ಆಗಿದೆ.

ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಜೂ.18, 2023ರ ಸಂಜೆ ಗುರುದ್ವಾರದ ಎದುರಿಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದರ ಈ ವಿಡಿಯೋವನ್ನು ಸಿಬಿಸಿ ನ್ಯೂಸ್‌ ಪ್ರಸಾರ ಮಾಡಿದೆ. ತನಗೆ ಈ ದೃಶ್ಯಾವಳಿಯು ಸಿಬಿಸಿ ನೆಟ್‌ವರ್ಕ್‌ ನಡೆಸುವ ದಿ ಫಿಫ್ತ್‌ ಎಸ್ಟೇಟ್‌ ಸಾಕ್ಷ್ಯಚಿತ್ರ ಸರಣಿಯ ತಂಡದ ಮೂಲಕ ಲಭಿಸಿದ್ದಾಗಿ ತಿಳಿಸಿದೆ.

ಈ ದೃಶ್ಯಾವಳಿಯಲ್ಲಿ ನಿಜ್ಜರ್‌ ಗುರುದ್ವಾರದಿಂದ ತನ್ನ ಟ್ರಕ್‌ ಮೂಲಕ ಹೊರಟಾಗ ಸೆಡಾನ್‌ ಕಾರಿನಲ್ಲಿದ್ದ ದುಷ್ಕರ್ಮಿಗಳು ಟ್ರಕ್‌ ಅನ್ನು ಅಡ್ಡಗಟ್ಟುತ್ತಾರೆ. ಬಳಿಕ ಕಾರಿನಿಂದ ಇಬ್ಬರು ಇಳಿದು ಟ್ರಕ್‌ ಏರಿ ನಿಜ್ಜರ್‌ಗೆ ಗುಂಡಿಕ್ಕಿ ಟೊಯೊಟಾ ಕ್ಯಾಮ್ರೆ ವಾಹನದಲ್ಲಿ ಪರಾರಿಯಾಗುತ್ತಾರೆ.

ಈ ವಿಡಿಯೋ, ಹತ್ಯೆಯ ಹಿಂದೆ ತಾನಿಲ್ಲ. ಬೇರಾರೋ ಇದ್ದಾರೆ ಎಂಬ ಭಾರತದ ವಾದಕ್ಕೆ ಸಮರ್ಥನೆ ನೀಡಬಹುದಾಗಿದ್ದು, ನಿಜವಾದ ಹಂತಕರನ್ನು ಗುರುತಿಸಲು ಸಹಾಯವಾಗಲಿದೆ ಎಂದು ಹೇಳಲಾಗಿದೆ.ಈ ಸಾಕ್ಷ್ಯಚಿತ್ರದಲ್ಲಿ ಹೇಳಿಕೆ ನೀಡಿರುವ ಪ್ರತ್ಯಕ್ಷದರ್ಶಿ ಭೂಪಿಂದರ್‌ ಸಿಂಗ್‌ ಸಿಧು, ‘ಗುರುದ್ವಾರದ ಸಮೀಪದಲ್ಲೇ ಫೂಟ್‌ಬಾಲ್‌ ಆಡುತ್ತಿದ್ದ ನಮಗೆ ಗುಂಡಿನ ಶಬ್ದ ಕೇಳಿಸಿದ ಕೂಡಲೇ ನಾನು ನಿಜ್ಜರ್‌ನತ್ತ ಧಾವಿಸಿ ನನ್ನ ಗೆಳೆಯ ಮಾಲಕ್‌ಜಿತ್‌ ಸಿಂಗ್‌ಗೆ ಗುಂಡಿಕ್ಕಿದವರನ್ನು ಹಿಡಿಯಲು ತಿಳಿಸಿದೆ. ಆದರೆ ನಾನು ನಿಜ್ಜರ್‌ ಎದೆಯನ್ನು ಹಲವು ಬಾರಿ ಒತ್ತಿದರೂ ಪ್ರಯೋಜನವಾಗಲಿಲ್ಲ. ಅಷ್ಟರೊಳಗೆ ಹರ್ದೀಪ್‌ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ನಡುವೆ ನಿಜ್ಜರ್‌ ಕೊಲೆಗಾರರು ಮತ್ತೊಂದು ಕಾರು ಹತ್ತಿ ಪರಾರಿಯಾದರು’ ಎಂದು ಹೇಳಿಕೆ ನೀಡಿದ್ದಾರೆ.