ಚಿಲಿ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಬಲಿ

| Published : Feb 06 2024, 01:30 AM IST / Updated: Feb 06 2024, 12:05 PM IST

ಸಾರಾಂಶ

ಚಿಲಿ ದೇಶದ ಡೆಲ್‌ ಮಾರ್‌ ನಗರದಲ್ಲಿ ಕಾಡ್ಗಿಚ್ಚು ಹಬ್ಬಿದ ಪರಿಣಾಮ 200 ಜನ ಕಾಣೆಯಾಗಿದ್ದಾರೆ. 1,600 ಜನರ ಮನೆ ಸುಟ್ಟು ಭಸ್ಮವಾಗಿದೆ.

ಸ್ಯಾಂಟಿಯಾಗೊ (ಚಿಲಿ): ಚಿಲಿ ದೇಶದ ವಿನಾ ಡೆಲ್ ಮಾರ್ ನಗರದ ಸುತ್ತಲೂ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ದುರಂತದಲ್ಲಿ ಈವರೆಗೆ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೂ ಬರೋಬ್ಬರಿ 8,000 ಹೆಕ್ಟೇರ್ ಪ್ರದೇಶದಲ್ಲಿದ್ದ ಅರಣ್ಯ ಪ್ರದೇಶ ಮತ್ತು ನಗರಗಳು ಸುಟ್ಟು ಹೋಗಿವೆ ಎಂದು ಸರ್ಕಾರ ಹೇಳಿದೆ.

ಇನ್ನು ನಗರದ ಸುತ್ತಲೂ ಸುಮಾರು 200 ಜನರು ಕಾಣೆಯಾಗಿದ್ದು, ಅವರೆಲ್ಲ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದ ಅನೇಕರ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

1931ರಲ್ಲಿ ಸ್ಥಾಪಿಸಲಾಗಿದ್ದ ಪ್ರಸಿದ್ಧ ಉದ್ಯಾನದಲ್ಲಿ ಶನಿವಾರ ಇದ್ದಕ್ಕಿದ್ದಂತೆ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಈಗಾಗಲೇ 1,600 ಹೆಚ್ಚು ಜನರ ಮನೆಗಳು ಬೆಂಕಿಗೆ ಆಹುತಿಯಾಗಿವೆ ಹಾಗೂ ಸಾವಿರಾರು ವಾಹನಗಳು ಸುಟ್ಟು ಕರಕಲಾಗಿವೆ. ಇನ್ನು ಭಾರೀ ಪ್ರಮಾಣದ ಬೆಂಕಿ ನೆಂದಿಸಲು ಅಗ್ನಿಶಾಮಕ ದಳಗಳು ಹರಸಾಹಸ ಪಟ್ಟಿವೆ.