ಚಂದಿರನ ಅಂಗಳದಿಂದ 2 ಕೇಜಿ ಕಲ್ಲು, ಮಣ್ಣು ಹೊತ್ತು ತಂದ ಚೀನಾ

| Published : Jun 26 2024, 01:34 AM IST / Updated: Jun 26 2024, 08:13 AM IST

ಚಂದಿರನ ಅಂಗಳದಿಂದ 2 ಕೇಜಿ ಕಲ್ಲು, ಮಣ್ಣು ಹೊತ್ತು ತಂದ ಚೀನಾ
Share this Article
  • FB
  • TW
  • Linkdin
  • Email

ಸಾರಾಂಶ

ಚಂದಿರನ ಅಂಗಳದಿಂದ 2 ಕೇಜಿ ಕಲ್ಲು, ಮಣ್ಣು ಹೊತ್ತು ತಂದ ಚೀನಾ ವ್ಯೋಮನೌಕೆ, ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಚೀನಾ ಸಾಹಸಗೈದಿದೆ. ಈ ಮೂಲಕ ಚೀನಾದ ಚಾಂಗ್‌- 6 ನೌಕೆಯ ಚಂದ್ರಯಾನ ಯಶಸ್ವಿಯಾಗಿದೆ.

 ಬೀಜಿಂಗ್‌ : ಭೂಮಿಗೆ ಗೋಚರಿಸದ ಚಂದಿರನ ಮತ್ತೊಂದು ಬದಿಯಿಂದ 2 ಕೇಜಿ ಕಲ್ಲು ಹಾಗೂ ಮಣ್ಣನ್ನು ಹೊತ್ತು ಚೀನಾದ ಚಾಂಗ್‌-6 ಚಂದ್ರಯಾನ ನೌಕೆ ಯಶಸ್ವಿಯಾಗಿ ಮಂಗಳವಾರ ಭುವಿಗೆ ಮರಳಿದೆ. ಈವರೆಗೂ ಹೆಚ್ಚು ಸಂಶೋಧನೆಯಾಗದ ಚಂದಿರನ ಮತ್ತೊಂದು ಬದಿಯಿಂದ ಮಾದರಿಗಳನ್ನು ಸಂಗ್ರಹಿಸಿ ತರುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹಿರಿಮೆಗೆ ಚೀನಾ ಪಾತ್ರವಾಗಿದೆ.

ಉತ್ತರ ಚೀನಾದ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿರುವ ನಿಗದಿತ ಪ್ರದೇಶದಲ್ಲಿ ಮಧ್ಯಾಹ್ನ 2.07 (ಬೀಜಿಂಗ್‌ ಸಮಯ) ಚೀನಾದ ಚಾಂಗ್‌-6 ನೌಕೆ ಬಂದಿಳಿದಿದೆ. ಈ ಯಾನ ಯಶಸ್ವಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ಘೋಷಣೆ ಮಾಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

2023ರ ಆಗಸ್ಟ್‌ನಲ್ಲಿ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ನೌಕೆ-3 ಇಳಿಸಿತ್ತು. ಆದರೆ ಚೀನಾ ಚಂದಿರನ ಮತ್ತೊಂದು ಬದಿಯಲ್ಲಿ ನೌಕೆ ಇಳಿಸಿರುವ ಏಕೈಕ ದೇಶವಾಗಿದೆ. 2019ರಲ್ಲೂ ಆ ದೇಶ ಇದೇ ಸಾಧನೆ ಮಾಡಿತ್ತು. ಭೂಮಿಗೆ ಗೋಚರವಾಗುವ ಚಂದಿರನ ಭಾಗಕ್ಕೆ ಹೋಲಿಸಿದರೆ, ಮತ್ತೊಂದು ಭಾಗ ದೂರದಲ್ಲಿರುವುದಲ್ಲದೆ ದೊಡ್ಡ ಕುಳಿಗಳು ಹಾಗೂ ಸಮತಟ್ಟಾದ ಪ್ರದೇಶಗಳಿಂದಾಗಿ ವಿಜ್ಞಾನಿಗಳಿಗೆ ತಾಂತ್ರಿಕವಾಗಿ ಸವಾಲಿನ ಭಾಗವಾಗಿದೆ.

ಚಾಂಗ್‌-6 ನೌಕೆ ಕಳೆದ ಮೇ 3ರಂದು ಉಡಾವಣೆಯಾಗಿತ್ತು. ಚಾಂಗ್‌-5 ಯೋಜನೆಯ ಭಾಗವಾಗಿ ಕೂಡ ಚೀನಾ ಚಂದ್ರನ ಅಂಗಳದಿಂದ (ಭೂಮಿಗೆ ಗೋಚರವಾಗುವ ಭಾಗ) ಮಾದರಿ ಸಂಗ್ರಹಿಸಿ ತಂದಿತ್ತು.