ಮಾಲ್ಡೀವ್ಸ್‌ನ ಹತ್ತಿರಕ್ಕೆ ತಲುಪಿದ ಚೀನಾದ ಬೇಹುಗಾರಿಕಾ ಹಡಗು!

| Published : Feb 23 2024, 01:48 AM IST / Updated: Feb 23 2024, 08:41 AM IST

ಮಾಲ್ಡೀವ್ಸ್‌ನ ಹತ್ತಿರಕ್ಕೆ ತಲುಪಿದ ಚೀನಾದ ಬೇಹುಗಾರಿಕಾ ಹಡಗು!
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಮಹಾಸಾಗರದಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌ ದೇಶಗಳು ಬಹುತೇಕ ಯಶಸ್ವಿಯಾಗಿವೆ. ಈ ನಡುವೆ ಮಾಲ್ಡೀವ್ಸ್‌ ಬಂದರು ಸಮೀಪಕ್ಕೆ ಚೀನಾದ ಬೇಹುಗಾರಿಕಾ ಹಡಗು ತಲುಪಿದೆ.

ಮಾಲೆ: ಚೀನಾದಿಂದ ಹೊರಟಿರುವ ಶಂಕಿತ ಬೇಹುಗಾರಿಕಾ ಹಡಗು ಮಾಲ್ಡೀವ್ಸ್‌ನ ಮಾಲೆ ತೀರದ ಸಮೀಪಕ್ಕೆ ತಲುಪಿದ್ದು, ಇಲ್ಲೇ ಕೆಲವು ದಿನಗಳ ಕಾಲ ಲಂಗರು ಹಾಕಲಿದೆ. ಇದರ ಬೆನ್ನಲ್ಲೇ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಜಂಟಿ ಸಮರಾಭ್ಯಾಸ ಆರಂಭಿಸಿವೆ.

ಚೀನಾದ ಹಡಗು ಕ್ಸಿಯಾಂಗ್‌ ಯಾಂಗ್‌ ಹಾಂಗ್‌-03 ಗುರುವಾರ ಮಧ್ಯಾಹ್ನ ಮಾಲೆ ಬಂದರಿಗೆ ತಲುಪಿದೆ ಎಂದು ಹಡಗುಗಳ ಮೇಲೆ ನಿಗಾ ಇಡುವ ಎಡಿಟಿಯಾನ್‌ ವೆಬ್‌ಸೈಟ್‌ ವರದಿ ಮಾಡಿದೆ. 

ಈ ಹಡಗು ಮಾಲ್ಡೀವ್ಸ್‌ನಲ್ಲಿ ಲಂಗರು ಹಾಕುವುದಕ್ಕಾಗಿ ಜ.23ರಂದು ಸರ್ಕಾರ ಅನುಮತಿ ನೀಡಿತ್ತು. 

ಸಮುದ್ರದ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಈ ಸಂಶೋಧನಾ ಹಡಗನ್ನು ಕಳುಹಿಸಲಾಗಿದೆ ಎಂದು ಚೀನಾ ಹೇಳಿದ್ದರೂ ಸಹ ಇದೊಂದು ಬೇಹುಗಾರಿಕಾ ಹಡಗು ಆಗಿರಬಹುದು ಎಂಬ ಕಾರಣಕ್ಕೆ ನೆರೆಯ ದೇಶಗಳು ಇದರ ಮೇಲೆ ಕಣ್ಣಿಟ್ಟಿವೆ. 

ಕಳೆದ ವರ್ಷ ನಡೆದ ಮಾಲ್ಡೀವ್ಸ್‌ ಅಧ್ಯಕ್ಷ ಚುನಾವಣೆಯಲ್ಲಿ ಚೀನಾ ಪ್ರಿಯ ಮೊಹಮ್ಮದ್‌ ಮಯಿಜು ಅಧಿಕಾರಕ್ಕೆ ಏರಿದ ಬಳಿಕ ಉಭಯ ದೇಶಗಳ ಸಂಬಂಧದಲ್ಲಿ ಭಾರಿ ಬದಲಾವಣೆಯಾಗಿದ್ದು, ಭಾರತ ತನ್ನ ಸೇನಾ ತುಕಡಿಯನ್ನು ಮರಳಿ ಪಡೆಯುವಂತೆಯೂ ಮಯಿಜು ಸೂಚಿಸಿದ್ದರು. 

ಜಂಟಿ ಸಮರಾಭ್ಯಾಸ: ಇನ್ನು ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಕೋಸ್ಟ್‌ಗಾರ್ಡ್‌, ಭಾರತ ಮತ್ತು ಶ್ರೀಲಂಕಾದ ನೌಕಾಪಡೆಗಳು ‘ದೋಸ್ತಿ-16’ ಹೆಸರಿನಲ್ಲಿ ಜಂಟಿ ಸಮರಾಭ್ಯಾಸವನ್ನು ಗುರುವಾರ ಆರಂಭಿಸಿವೆ. 

ಇದು ಫೆ.25ರವರೆಗೆ ಮುಂದುವರೆಯಲಿದೆ. ಪರಸ್ಪರ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಸೇನಾ ಸಹಭಾಗಿತ್ವವನ್ನು ಉತ್ತಮಪಡಿಸಿಕೊಳ್ಳಲು ಈ ಅಭ್ಯಾಸವನ್ನು ಕೈಗೊಳ್ಳಲಾಗುತ್ತದೆ.