ಜಗತ್ತಿನಲ್ಲಿ ಮತ್ತೆ ಕೋವಿಡ್‌ ಭೀತಿ ಶುರು!

| Published : Dec 17 2023, 01:45 AM IST / Updated: Jan 05 2024, 05:11 PM IST

ಸಾರಾಂಶ

ಕಳೆದೊಂದು ತಿಂಗಳ ಅವಧಿಯಲ್ಲಿ ಚೀನಾ ಮತ್ತು ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿ ಆತಂಕ ಮೂಡಿಸಿದ್ದ ಕೋವಿಡ್‌ ವೈರಸ್‌ನ ಹೊಸ ರೂಪಾಂತರಿ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಕೇರಳದ 79 ವರ್ಷದ ಮಹಿಳೆಯೊಬ್ಬರಲ್ಲಿ ‘ಜೆಎನ್‌.1’ ಎಂಬ ರೂಪಾಂತರಿ ಪತ್ತೆಯಾಗಿದೆ. 

ದೇಶದ ಒಟ್ಟು ಕೇಸ್‌ಗಳಲ್ಲಿ ಕೇರಳದಲ್ಲೇ 90% । ಪನೂರು ನಗರದಲ್ಲಿ ಮಾಸ್ಕ್‌ ಕಡ್ಡಾಯನವದೆಹಲಿ: ಕಳೆದೊಂದು ತಿಂಗಳ ಅವಧಿಯಲ್ಲಿ ಚೀನಾ ಮತ್ತು ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿ ಆತಂಕ ಮೂಡಿಸಿದ್ದ ಕೋವಿಡ್‌ ವೈರಸ್‌ನ ಹೊಸ ರೂಪಾಂತರಿ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಕೇರಳದ 79 ವರ್ಷದ ಮಹಿಳೆಯೊಬ್ಬರಲ್ಲಿ ‘ಜೆಎನ್‌.1’ ಎಂಬ ರೂಪಾಂತರಿ ಪತ್ತೆಯಾಗಿದೆ. ಮತ್ತೊಂದೆಡೆ, ಕಳೆದೊಂದು ವಾರದಿಂದ ದೇಶದಲ್ಲಿ ಪತ್ತೆಯಾದ ಹೊಸ ಪ್ರಕರಣಗಳ ಪೈಕಿ ಶೇ.90ರಷ್ಟು ಪಾಲು ಕೇರಳದ್ದೇ ಆಗಿದ್ದು, ಮೂವರನ್ನು ಬಲಿ ಕೂಡಾ ಪಡೆದಿದೆ. 

ಹೀಗಾಗಿ ಇದೀಗ ಮತ್ತೆ ದೇಶದಲ್ಲಿ ಹೊಸ ಕೋವಿಡ್‌ ಅಲೆಯ ಭೀತಿ ಸೃಷ್ಟಿಯಾಗಿದೆ.ಕೇರಳದಲ್ಲಿ ಹೊಸ ರೂಪಾಂತರಿ ಪತ್ತೆಯಾದ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ತಮಿಳುನಾಡು, ಕರ್ನಾಟಕದಲ್ಲಿ ಸರ್ಕಾರಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ.ಹೊಸ ರೂಪಾಂತರಿ:ವಿಶ್ವದ ಹಲವೆಡೆ ವ್ಯಾಪಿಸಿರುವ ಕೋವಿಡ್‌ನ ಹೊಸ ಮಾದರಿಯಾದ ‘ಜೆಎನ್‌.1’ ಇದೀಗ ಕೇರಳದ 79 ವರ್ಷದ ಮಹಿಳೆಯಲ್ಲಿ ಪತ್ತೆಯಾಗಿದೆ. ಈ ಮಹಿಳೆಗೆ ನ.18ರಂದು ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿತ್ತು. 

ಪರೀಕ್ಷೆಯಲ್ಲಿ ಕೋವಿಡ್‌ ಇರುವುದು ಸಾಬೀತಾಗಿತ್ತು. ಜ್ವರ ರೀತಿಯ ಲಕ್ಷಣ ಕಂಡುಬಂದಿತ್ತು. ಆ ಮಹಿಳೆ ಗುಣಮುಖರಾಗಿದ್ದರು. ಆದರೆ ಡಿ.8ರಂದು ಬಂದ ವರದಿಯಲ್ಲಿ ಆಕೆಗೆ ತಗುಲಿದ್ದು ಕೋವಿಡ್‌ನ ಹೊಸ ಮಾದರಿ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೆಎನ್‌.1 ರೂಪಾಂತರಿ ವೈರಸ್‌ ಮೊದಲು ಐರೋಪ್ಯ ದೇಶವಾದ ಲುಕ್ಶಂಬರ್ಗ್‌ನಲ್ಲಿ ಪತ್ತೆಯಾಗಿತ್ತು. ಬಳಿಕ ವಿಶ್ವದ ಹಲವು ದೇಶಗಳಿಗೆ ವ್ಯಾಪಿಸಿದೆ. 

ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಲ್ಲಿ ಅ.25ರಂದು ಇದೇ ಸೋಂಕು ಕಂಡುಬಂದಿತ್ತು. ಆದರೆ ತಿರುಚಿರಾಪಳ್ಳಿ ಅಥವಾ ತಮಿಳುನಾಡಿನ ಇತರೆ ಯಾವ ಭಾಗದಲ್ಲೂ ಈ ಸೋಂಕು ಪತ್ತೆಯಾಗಿರಲಿಲ್ಲ. ದೇಶಾದ್ಯಂತ ಕೂಡ ಈ ಸೋಂಕು ದೃಢಪಟ್ಟಿರಲಿಲ್ಲ.ಇತ್ತೀಚೆಗೆ ಚೀನಾ ಮತ್ತು ಅಮೆರಿಕದಲ್ಲಿ ಇದೇ ವೈರಸ್‌ ಕಾಣಿಸಿಕೊಂಡಿತ್ತು.ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ಸೋಂಕಿನಿಂದಾಗಿ ಆಸ್ಪತ್ರೆಗಳೆಲ್ಲಾ ತುಂಬಿತುಳುಕುವ ಪರಿಸ್ಥಿತಿ ನಿರ್ಮಾಣವಾಗಿ 2020ರ ಕರಾಳ ದಿನಗಳು ನೆನಪಾಗುವಂತಾಗಿತ್ತು.

ಹೇಗೆ ಭಿನ್ನ?: ಈ ವೈರಸ್‌ ಹಲವು ರೂಪಾಂತರಗಳನ್ನು ಕಂಡಿರುವ ಕಾರಣ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ದೇಹದ ರೋಗನಿರೋಧಕ ಶಕ್ತಿಯನ್ನೂ ಭೇದಿಸುವ ಸಾಮರ್ಥ್ಯ ಇದಕ್ಕೆ ಅಧಿಕವಾಗಿದೆ. ಕೋವಿಡ್‌ ಲಸಿಕೆಯ ಮೂಲಕ ಈ ಸೋಂಕಿನಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಕೇರಳ ಹೈಅಲರ್ಟ್‌:ಮೂರು ವರ್ಷಗಳ ಹಿಂದೆ ದೇಶದಲ್ಲೇ ಮೊದಲ ಕೊರೋನಾ ಸೋಂಕು ಪ್ರಕರಣ ಪತ್ತೆಯಾದ ಕೇರಳದಲ್ಲಿ ಈಗ ಕೋವಿಡ್‌ ಮತ್ತೆ ಏರುಗತಿಯಲ್ಲಿದೆ. ಡಿಸೆಂಬರ್‌ ಆರಂಭದಿಂದ ದೇಶದಲ್ಲಿ ದೃಢಪಡುತ್ತಿರುವ ಹೊಸ ಕೊರೋನಾ ಸೋಂಕು ಪ್ರಕರಣಗಳಲ್ಲಿ ಕೇರಳದ ಪಾಲೇ ಶೇ.90ರಷ್ಟಿರುವ ಸಂಗತಿ ಕಳವಳ ಹುಟ್ಟಿಸುತ್ತಿದೆ.ಡಿಸೆಂಬರ್‌ ಆರಂಭವಾದ ಬಳಿಕ ಕೇರಳದಲ್ಲಿ ಮೂವರು ಕೋವಿಡ್‌ಗೆ ಬಲಿಯಾಗಿದ್ದಾರೆ. 

ಇದರಿಂದ ಎಚ್ಚೆತ್ತಿರುವ ಕಣ್ಣೂರು ಜಿಲ್ಲೆಯ ಪನೂರು ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.ಕೇರಳದಲ್ಲಿ ನವೆಂಬರ್‌ ತಿಂಗಳಿನಲ್ಲಿ 470 ಕೋವಿಡ್‌ ಕೇಸ್‌ ಪತ್ತೆಯಾಗಿದ್ದವು. ಆದರೆ ಡಿಸೆಂಬರ್‌ನ ಮೊದಲ 10 ದಿನಗಳಲ್ಲಿ 825 ಹೊಸ ಪ್ರಕರಣ ದೃಢಪಟ್ಟಿವೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ. ಈ ಅವಧಿಯಲ್ಲಿ ದೇಶಾದ್ಯಂತ ಪತ್ತೆಯಾದ ಪ್ರಕರಣಗಳಿಗೆ ಹೋಲಿಸಿದರೆ ಶೇ.90ರಷ್ಟು.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇವಿದೇಶಗಳಲ್ಲಿ ಮತ್ತು ಭಾರತದಲ್ಲಿ ಕೋವಿಡ್‌ ಏರಿಕೆಯಾಗುತ್ತಿದೆ ಎಂದು ಕನ್ನಡಪ್ರಭ ಶುಕ್ರವಾರವೇ ವರದಿ ಮಾಡಿತ್ತು.