ಸಾರಾಂಶ
ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ದೇಶದ ಗಡಿ ಹಾಗೂ ಜನರನ್ನು ರಕ್ಷಿಸುವ ಆದೇಶಕ್ಕೆ ಸಹಿ ಹಾಕಿದ್ದ ಡೊನಾಲ್ಡ್ ಟ್ರಂಪ್, ಈ ಗಡಿಗಳ ಮೂಲಕ ಒಳನುಸುಳಿದ್ದ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಕೆಲಸ ಶುರು ಮಾಡಿದ್ದಾರೆ
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ದೇಶದ ಗಡಿ ಹಾಗೂ ಜನರನ್ನು ರಕ್ಷಿಸುವ ಆದೇಶಕ್ಕೆ ಸಹಿ ಹಾಕಿದ್ದ ಡೊನಾಲ್ಡ್ ಟ್ರಂಪ್, ಈ ಗಡಿಗಳ ಮೂಲಕ ಒಳನುಸುಳಿದ್ದ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಕೆಲಸ ಶುರು ಮಾಡಿದ್ದಾರೆ. ಅವರ ಮೊದಲ 3 ದಿನದ ಅಧಿಕಾರಾವಧಿಯಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 538 ವಲಸಿಗರನ್ನು ಬಂಧಿಸಲಾಗಿದ್ದು, ಗಡೀಪಾರು ಮಾಡಲಾಗಿದೆ.
ಕೋಟ್ಯಂತರ ಜನರು ಅಮೆರಿಕಕ್ಕೆ ಒಳನುಸುಳಿದ್ದ ಹಿನ್ನೆಲೆಯಲ್ಲಿ ಅವರನ್ನು ದೇಶದಿಂದ ಹೊರ ಹಾಕುವ ವಿಶ್ವದ ಅತಿದೊಡ್ಡ ಗಡೀಪಾರು ಅಭಿಯಾನ ಆರಂಭಿಸಿಸುವುದಾಗಿ ಚುನಾವಣೆ ವೇಳೆ ಟ್ರಂಪ್ ಹೇಳಿದ್ದರು. ಅದನ್ನು ಈ ಕಾರ್ಯರೂಪಕ್ಕೆ ತರಲು ಆರಂಭಿಸಿದ್ದಾರೆ. ಈಗ ಗಡೀಪಾರಿಗೆ ಒಳಗಾದವರಲ್ಲಿ ಓರ್ವ ಭಯೋತ್ಪಾದಕ ಸೇರಿ ಅತ್ಯಾಚಾರಿಗಳು ಹಾಗು ಕ್ರಿಮಿನಲ್‌ಗಳಿದ್ದಾರೆ.
ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಮಾಹಿತಿ ನೀಡಿದ್ದು, ‘ಟ್ರಂಪ್ ಆಡಳಿತವು ಶಂಕಿತ ಉಗ್ರರು, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರು ಸೇರಿದಂತೆ 538 ಅಕ್ರಮ ವಲಸಿಗರನ್ನು ಬಂಧಿಸಿದೆ. ಅಂತೆಯೇ, ನೂರಾರು ಜನರನ್ನು ಸೇನಾ ವಿಮಾನದಲ್ಲಿ ಗಡೀಪಾರು ಮಾಡಲು ಆರಂಭಿಸಿದೆ’ ಎಂದಿದ್ದಾರೆ.
ಟ್ರಂಪ್ ಸಹಿ ಮಾಡಿದ್ದ ಆದೇಶದಲ್ಲಿ, ‘ಕಳೆದ 4 ವರ್ಷಗಳಲ್ಲಿ ಲಕ್ಷಾಂತರ ವಿದೇಶಿ ವಲಸಿಗರು ಗಡಿ ದಾಟಿ ಅಥವಾ ವಿಮಾನದ ಮೂಲದ ಬಂದು ಅಮೆರಿಕದಲ್ಲಿ ನೆಲೆಸಿದ್ದರು. ಅವರಿಂದ ರಾಷ್ಟ್ರದ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತದೆ’ ಎಂದು ತಿಳಿಸಲಾಗಿತ್ತು.
ಗಡೀಪಾರಿಗೆ ಬೆದರಿ ಕೆಲಸ ಬಿಟ್ಟ ಭಾರತೀಯ ವಿದ್ಯಾರ್ಥಿಗಳು!
ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ದೇಶದಲ್ಲಿ ನೆಲೆಸಿರುವ ಎಲ್ಲಾ ವರ್ಗದ ವಲಸಿಗರಿಗೆ, ವಿಶೇಷವಾಗಿ ಭಾರತೀಯರಿಗೆ ಗಡೀಪಾರಿನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಹೋಗಿರುವ ವಿದ್ಯಾರ್ಥಿಗಳು ಗಡೀಪಾರಿಗೆ ಬೆದರಿ ಅರೆಕಾಲಿಕ ಉದ್ಯೋಗ ತೊರೆಯಲು ಮುಂದಾಗಿದ್ದಾರೆ.
ಅಮೆರಿಕದ ನಿಯಮದ ಪ್ರಕಾರ ಎಫ್-1 ವೀಸಾ ಪಡೆದು ಬರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲೇ ವಾರಕ್ಕೆ 20 ತಾಸು ಕೆಲಸ ಮಾಡುವ ಅವಕಾಶವಿದೆ. ಆದರೆ ಹಲವರು ಇದನ್ನು ಉಲ್ಲಂಘಿಸಿ ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಕಿರಾಣಿ ಅಂಗಡಿ ಸೇರಿದಂತೆ ಅನೇಕ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಇದೀಗ ವಲಸೆ ನೀತಿ ಬಿಗಿಗೊಂಡಿರುವ ಹಿನ್ನೆಲೆಯಲ್ಲಿ ಅವರೆಲ್ಲ ಕೆಲಸ ಬಿಡಲು ನಿರ್ಧರಿಸಿದ್ದಾರೆ.
ಈ ಕುರಿತು ಮಾತನಾಡಿದ ಕೆಲ ವಿದ್ಯಾರ್ಥಿಗಳು, ‘ಅಮೆರಿಕದಲ್ಲಿ ಖರ್ಚು ವೆಚ್ಚಗಳನ್ನು ನಿಭಾಯಿಸಲು ಹಾಗೂ ವಿದ್ಯಾಭ್ಯಾಸಕ್ಕಾಗಿ ಪಡೆದ ಸಾಲವನ್ನು ಮರುಪಾವತಿಸಲು ಈ ಕೆಲಸಗಳು ಅಗತ್ಯ. ಆದರೆ ಆ ಕಾರಣಕ್ಕೆ ಭವಿಷ್ಯವನ್ನು ಪಣಕ್ಕಿಡಲಾಗದು. ಆದ್ದರಿಂದ ಅರೆಕಾಲಿಕ ಕೆಲಸ ಬಿಡುತ್ತಿದ್ದೇವೆ’ ಎಂದರು. ಅಂತೆಯೇ, ಕೆಲ ತಿಂಗಳುಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ಮತ್ತೆ ಕೆಲಸಕ್ಕೆ ಸೇರುವ ಬಗ್ಗೆ ಯೋಚಿಸುತ್ತೇವೆ ಎಂದೂ ಹೇಳಿದರು.
ನ್ಯಾಯಯುತವಾಗಿ ಅಕ್ರಮ ಭಾರತೀಯ ವಲಸಿಗರ ಗಡೀಪಾರು ಮಾಡಿದರೆ ಅದಕ್ಕೆ ತಕರಾರಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಘೋಷಿಸಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.