ಸಾರಾಂಶ
ವಾಷಿಂಗ್ಟನ್: ತಮ್ಮ ಹತ್ಯೆ ಯತ್ನದ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತ ವ್ಯಕ್ತಪಡಿಸಿದ್ದರೂ ಶಾಂತಿ ಕಾಯ್ದುಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ.ಘಟನೆಯ ಬಳಿಕ ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ ಮೂಲಕ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್
ಟ್ರಂಪ್, ‘ಅಮೆರಿಕದಲ್ಲಿ ಇಂತಹ ಕೃತ್ಯ ನಡೆಯುತ್ತದೆ ಎಂಬುದು ನಿಜಕ್ಕೂ ಆಘಾತಕಾರಿ. ಸದ್ಯಕ್ಕೆ ನನಗೆ ಹಂತಕನ ಬಗ್ಗೆ ಏನೂ ಗೊತ್ತಿಲ್ಲ. ಅವನು ಸತ್ತಿದ್ದಾನೆ. ನನ್ನ ಬಲಗಿವಿಯ ಮೇಲ್ತುದಿಯನ್ನು ಕತ್ತರಿಸಿಕೊಂಡು ಗುಂಡು ಹಿಂದಕ್ಕೆ ಹೋಗಿದೆ.
ಗುಂಡಿನ ಶಬ್ದ ಕೇಳುತ್ತಲೇ ಏನೋ ಆಗುತ್ತಿದೆ ಎಂದು ನನಗೆ ಅನ್ನಿಸಿತ್ತು. ಅಷ್ಟರಲ್ಲಿ ನನ್ನ ಚರ್ಮ ಸೀಳಿಕೊಂಡು ಗುಂಡು ಹಾರಿತು. ಸಾಕಷ್ಟು ರಕ್ತ ಹೋಗಿದೆ. ದೇವರು ಅಮೆರಿಕವನ್ನು ಕಾಪಾಡಲಿ!’ ಎಂದು ಬರೆದಿದ್ದಾರೆ.ಬಳಿಕ ಇನ್ನೊಂದು ಹೇಳಿಕೆ ನೀಡಿರುವ ಅವರು, ‘ಈ ಸಂದರ್ಭದಲ್ಲಿ ಜನರು ಶಾಂತಿ ಹಾಗೂ ಸಮಚಿತ್ತ ಕಾಯ್ದುಕೊಳ್ಳಬೇಕು. ಅಮೆರಿಕಕ್ಕೆ ಇಂಥ ಮಹತ್ವದ ಸಂದರ್ಭದಲ್ಲಿ ಸಮಚಿತ್ತ ಕಾಯ್ದುಕೊಳ್ಳುವುದು ಮುಖ್ಯ’ ಎಂದು ಜನತೆಗೆ ಕರೆ ನೀಡಿದ್ದಾರೆ.