ಸಾರಾಂಶ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಅಧ್ಯಕ್ಷನಾದರೆ ಅಮೆರಿಕದ ಕಾಲೇಜುಗಳಲ್ಲಿ ಪದವಿ ಪಡೆಯುವ ವಿದೇಶಿ ವಿದ್ಯಾರ್ಥಿಗಳಿಗೆ ತತ್‌ಕ್ಷಣವೇ ಗ್ರೀನ್ ಕಾರ್ಡ್ ಲಭ್ಯವಾಗುವ ಕಾಯ್ದೆ ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೂ ಮುಂಚಿತವಾಗಿ ವಲಸಿಗರ ಕುರಿತ ತಮ್ಮ ಧೋರಣೆ ಮೃದು ಮಾಡಿದ್ದಾರೆ.
ಹಾಲಿ ಅಧ್ಯಕ್ಷ ಜೋ ಬೈಡೆನ್, ಅಮೆರಿಕನ್ನರನ್ನು ಮದುವೆಯಾಗುವ ವಲಸಿಗರಿಗೆ ಪೌರತ್ವ ನೀಡುವ ಯೋಜನೆ ಪ್ರಕಟಿಸಿದ ಬೆನ್ನಲ್ಲೇ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಅಮೆರಿಕಕ್ಕೆ ಆಗಮಿಸಿ ಇಲ್ಲಿನ ಕಾಲೇಜುಗಳಿಂದ ಪದವಿ ಪಡೆಯುತ್ತಾರೆ. ಆದರೆ ಬಳಿಕ ಇಲ್ಲೇ ಉಳಿಯಲಾಗದೇ ತಮ್ಮ ತವರು ದೇಶ ಭಾರತ, ಚೀನಾಕ್ಕೆ ತೆರಳುತ್ತಾರೆ.
ಅಲ್ಲಿ ಹೊಸ ಉದ್ಯಮ ಸ್ಥಾಪಿಸಿ ಸಾವಿರಾರು ಯುವಕರಿಗೆ ಉದ್ಯೋಗ ನೀಡುತ್ತಾರೆ. ತಾವು ಬಿಲಿಯನೇರ್‌ಗಳಾಗಿ ಹೊರಹೊಮ್ಮುತ್ತಾರೆ. ಅಂಥವರನ್ನು ಇಲ್ಲೇ ಉಳಿಸಿಕೊಳ್ಳಲು ನೀವು ಪದವಿ ಪಡೆದಾಕ್ಷಣ ಗ್ರೀನ್‌ಕಾರ್ಡ್ ಸಿಗುವ ವ್ಯವಸ್ಥೆ ಮಾಡುತ್ತೇನೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.ಗ್ರೀನ್ ಕಾರ್ಡ್ ಎನ್ನುವುದು ಅಮೆರಿಕದಲ್ಲಿ ಶಾಶ್ವತ ನಿವಾಸಿಗಳಿಗೆ ನೀಡುವ ಕಾರ್ಡ್ ಮತ್ತು ಪೌರತ್ವದ ಹೆಜ್ಜೆ. ಒಂದು ವೇಳೆ ಟ್ರಂಪ್ ಭರವಸೆ ಜಾರಿಯಾದರೆ ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರೀ ಲಾಭವಾಗಲಿದೆ.