ಸಾರಾಂಶ
ವಜಿಮಾ: ಜಪಾನ್‌ನಲ್ಲಿ ಭೂಕಂಪದಿಂದ ಅಸುನೀಗಿದವರ ಸಂಖ್ಯೆ 48ಕ್ಕೇರಿಕೆಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ನಡುವೆ ರಕ್ಷಣಾ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಅವಶೇಷಗಳಡಿಯಲ್ಲಿ ಮೃತರು ಸಿಕ್ಕ ನಂತರ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ತಿಳಿಸಿದೆ.ಮಂಗಳವಾರವೂ ಸಹ ಇಶಿಕಾವ ಪ್ರದೇಶದಲ್ಲಿ ಮತ್ತೆ 155 ಬಾರಿ ಪಶ್ಚಾತ್ ಕಂಪನವಾಗಿದ್ದು, ಭಾರೀ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಇದರ ನಿಖರ ಲೆಕ್ಕ ಕೊಡಲು ಸಾಧ್ಯವಿಲ್ಲದಿದ್ದರೂ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.ಈ ನಡುವೆ ಭೂಕಂಪದಿಂದಾಗಿ ಮನೆಗಳ ಜೊತೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳು ಸಹ ಬುಡಮೇಲಾಗುವ ಜೊತೆಗೆ, ಮಿನಿ ಸುನಾಮಿ ಕಾರಣ ಉಕ್ಕೇರಿದ್ದ ಸಮುದ್ರದಲ್ಲಿ ಹಡಗುಗಳೂ ಸಹ ಮುಳುಗುತ್ತಿವೆ.
ಇನ್ನೂ ಹಲವು ಪ್ರದೇಶಗಳಲ್ಲಿ ವಿದ್ಯುತ್, ನೀರು ಮತ್ತು ದೂರವಾಣಿ ಸೇವೆಗಳನ್ನು ಮರುಸ್ಥಾಪನೆ ಮಾಡಲಾಗಿಲ್ಲ. ಆದರೆ ಬುಲೆಟ್ ರೈಲು ಸೇವೆಗಳು ಮಂಗಳವಾರ ಮಧ್ಯಾಹ್ನದ ಬಳಿಕ ಪುನರಾರಂಭ ಮಾಡಿವೆ.ಇದರ ನಡುವೆ ಅಣು ಇಂಧನ ಘಟಕಗಳು ಯಾವುದೇ ಹಾನಿಗೊಳಗಾಗದೇ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ. ವಜಿಮಾ ನಗರದಲ್ಲಿ ಅಲ್ಪ ಪ್ರಮಾಣದಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಅಲ್ಲದೆ ಕೆಲವೆಡೆ ಒಂದು ಮಿಟರ್‌ಗೂ ಹೆಚ್ಚು ಎತ್ತರದ ಸುನಾಮಿ ಅಪ್ಪಳಿಸಿದೆ. ನಿರಾಶ್ರಿತರನ್ನು ಸಮುದಾಯ ಕೇಂದ್ರಗಳಲ್ಲಿ ರಕ್ಷಣೆ ಮಾಡಲಾಗಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕಳುಹಿಸಿರುವುದಾಗಿ ಪ್ರಧಾನಿ ಫುವೋಮಿ ಕಿಶಿದಾ ತಿಳಿಸಿದ್ದಾರೆ. ಜೊತೆಗೆ ಜಪಾನ್‌ಗೆ ಅಗತ್ಯ ಸಹಾಯ ಮಾಡಲು ಸಿದ್ಧರಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.