ಸಾರಾಂಶ
ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಹೊತ್ತಲ್ಲಿ ಶುಕ್ರವಾರ ಫ್ರಾನ್ಸ್‌ನ ರೈಲು ಜಾಲಗಳ ಮೇಲೆ ವಿಧ್ವಂಸಕ ದಾಳಿಯಾಗಿದೆ. ಹಲವು ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಸಂಚಾರ ಸ್ತಬ್ಧವಾಗಿದೆ ಹಾಗೂ 8 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಪ್ಯಾರಿಸ್: ಐತಿಹಾಸಿಕ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಹೊತ್ತಲ್ಲಿ ಶುಕ್ರವಾರ ಫ್ರಾನ್ಸ್‌ನ ರೈಲು ಜಾಲಗಳ ಮೇಲೆ ವಿಧ್ವಂಸಕ ದಾಳಿಯಾಗಿದೆ. ಹಲವು ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಸಂಚಾರ ಸ್ತಬ್ಧವಾಗಿದೆ ಹಾಗೂ 8 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ವಿದೇಶಗಳಿಂದ ಕ್ರೀಡಾಪಟುಗಳು ಆಗಮಿಸುವ ಕಾರಣ ಇದು ಕಳವಳಕ್ಕೆ ಕಾರಣವಾಗಿದೆ.
‘ಇದು ನಮ್ಮ ಸೌಕರ್ಯಗಳಿಗೆ ಹಾನಿ ಮಾಡಿ ಹೈ-ಸ್ಪೀಡ್ ರೈಲುಗಳ ಸಂಚಾರದಲ್ಲಿ ಅಡಚಣೆಯುಂಟುಮಾಡಲು ನಡೆಸಿದ ದಾಳಿ’ ಎಂದು ಫ್ರಾನ್ಸ್‌ನ ಸರ್ಕಾರಿ ಒಡೆತನದ ರೈಲ್ವೇ ಕಂಪನಿ ಆರೋಪಿಸಿದ್ದು, ಪರಿಣಾಮವಾಗಿ ಹಲವು ಮಾರ್ಗಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವದ ಮಾರ್ಗಗಳಿಗೆ ತೊಂದರೆಯಾಗಿದ್ದು, ಮುಂದಿನ 1 ವಾರ ಸಮಸ್ಯೆ ಮುಂದುವರೆಯುವ ಸಾಧ್ಯತೆಯಿದೆ.
ದಾಳಿಯನ್ನು ಖಂಡಿಸಿರುವ ಫ್ರಾನ್ಸ್ ಸಾರಿಗೆ ಸಚಿವ ಪ್ಯಾಟ್ರಿಸ್ ವರ್ಗ್ರಿಯೆಟ್, ಇದನ್ನು ಅತಿರೇಕದ ಅಪರಾಧ ಕೃತ್ಯ. ಬೇಕೆಂದೇ ಭೀತಿ ಮೂಡಿಸಲು ಒಲಿಂಪಿಕ್ಸ್ ವೇಳೆ ದಾಳಿ ನಡೆಸಲಾಗಿದೆ ಎಂದಿದ್ದಾರೆ. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆಯಾದರೂ ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ 8 ಲಕ್ಷ ಜನರಿಗೆ ಸಮಸ್ಯೆಯಾಗಿದೆ.