217 ಬಾರಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಜರ್ಮನ್‌ ವ್ಯಕ್ತಿ!

| Published : Mar 07 2024, 01:49 AM IST / Updated: Mar 07 2024, 01:50 AM IST

ಸಾರಾಂಶ

ಜರ್ಮನ್‌ ಮೂಲದ ವ್ಯಕ್ತಿಯೊಬ್ಬಕಳೆದ 29 ತಿಂಗಳ ಅವಧಿಯಲ್ಲಿ 217 ಬಾರಿ ಕೋವಿಡ್‌ ಲಸಿಕೆ ಪಡೆದುಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

-ಯಾವುದೇ ಅಡ್ಡಪರಿಣಾಮವಿಲ್ಲ । ರೋಗನಿರೋಧಕ ಶಕ್ತಿ ಹೆಚ್ಚಳನವದೆಹಲಿ: ಕೊರೋನಾ ಹೆಮ್ಮಾರಿಯಿಂದ ರಕ್ಷಿಸಿಕೊಳ್ಳಲು 2-3 ಬಾರಿ ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಜರ್ಮನ್‌ ಮೂಲದ ವ್ಯಕ್ತಿಯೊಬ್ಬಕಳೆದ 29 ತಿಂಗಳ ಅವಧಿಯಲ್ಲಿ 217 ಬಾರಿ ಕೋವಿಡ್‌ ಲಸಿಕೆ ಪಡೆದುಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ವಿಶೇಷವೆಂದರೆ ವೈದ್ಯರ ಸಲಹೆಗೆ ವಿರುದ್ಧವಾಗಿ ಇಷ್ಟೊಂದು ಲಸಿಕೆ ಪಡೆದರೂ ಆತನ ದೇಹದಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ ಎಂದು ‘ದಿ ಲ್ಯಾನ್ಸೆಟ್‌ ಇನ್‌ಫೆಕ್ಷಿಯಸ್‌ ದಿಸೀಸಸ್‌ ಜರ್ನಲ್‌’ ವರದಿಯೊಂದನ್ನು ಪ್ರಕಟಿಸಿದೆ.

ಖಾಸಗಿ ಉದ್ದೇಶಕ್ಕಾಗಿ ಹೀಗೆ ಲಸಿಕೆ ಪಡೆದುಕೊಂಡಿದ್ದಾಗಿ ಹೇಳಿಕೊಂಡಿರುವ ವ್ಯಕ್ತಿಯ ಹೆಸರನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಆದರೆ ಈತನ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಆತನನ್ನು ಸಂಶೋಧಕರ ತಂಡವೊಂದು ಅಧ್ಯಯನಕ್ಕೆ ಒಳಪಡಿಸಿತ್ತು. ಈತನ ಮೇಲೆ ವಿವಿಧ ಪರೀಕ್ಷೆಗಳನ್ನು ನಡೆಸಿ ಅಧ್ಯಯನ ಕೈಗೊಂಡಾಗ ಆತನಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ಹೆಚ್ಚು ಬಾರಿ ಲಸಿಕೆ ತೆಗೆದುಕೊಂಡ ಕಾರಣದಿಂದಲೇ ರೋಗನಿರೋಧಕ ಶಕ್ತಿ ಹೆಚ್ಚಿದೆ ಎಂಬುದು ಎಲ್ಲೂ ಸಾಬೀತಾಗಿಲ್ಲ ಎಂದೂ ಸಹ ಉಲ್ಲೇಖಿಸಿದೆ.

ಈತ 2019ರಿಂದ 2023ರ ಅಕ್ಟೋಬರ್‌ ಅವಧಿಯಲ್ಲಿ 8 ವಿವಿಧ ಕಂಪನಿಗಳ 217 ಡೋಸ್‌ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದ. ಈ ಪೈಕಿ 134 ಡೋಸ್‌ ಪಡೆದಿರುವುದು ಅಧಿಕೃತ ಮಾಹಿತಿ ಎಂದು ಸಂಶೋಧಕರಾದ ಫ್ರೆಡ್‌ರಿಕ್‌ ಅಲೆಕ್ಸಾಂಡರ್‌ ಮತ್ತು ಎರ್ಲಾಂಗೆನ್‌ ವಿಶ್ವವಿದ್ಯಾನಿಲಯದ ಸಂಶೋಧಕರಾದ ಡಾ. ಕಿಲಿಯನ್‌ ಸ್ಕೋಬರ್‌ ನೇತೃತ್ವದಲ್ಲಿ ನಡೆದ ಜಂಟಿ ಸಂಶೋಧನಾ ವರದಿ ಹೇಳಿದೆ.