ವಾರಾಂತ್ಯದಲ್ಲಿ ಅಯೋಧ್ಯೆ ರಾಮ ಮಂದಿರ ಮೇಲೆ ದಾಳಿ : ಖಲಿಸ್ತಾನಿ ಉಗ್ರ ಪನ್ನು ಧಮಕಿ

| Published : Nov 12 2024, 12:46 AM IST / Updated: Nov 12 2024, 04:31 AM IST

ಸಾರಾಂಶ

ಈ ವಾರಾಂತ್ಯದಲ್ಲಿ ಅಯೋಧ್ಯೆ ರಾಮಮಂದಿರ ಮತ್ತು ಕೆನಡಾದಲ್ಲಿನ ಹಲವು ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವುದಾಗಿ ‘ಸಿಖ್‌ ಫಾರ್ ಜಸ್ಟಿಸ್‌’ ಸಂಘಟನೆಯ ನಾಯಕ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಬೆದರಿಕೆ ಹಾಕಿದ್ದಾನೆ.

 ನವದೆಹಲಿ: ಈ ವಾರಾಂತ್ಯದಲ್ಲಿ ಅಯೋಧ್ಯೆ ರಾಮಮಂದಿರ ಮತ್ತು ಕೆನಡಾದಲ್ಲಿನ ಹಲವು ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವುದಾಗಿ ‘ಸಿಖ್‌ ಫಾರ್ ಜಸ್ಟಿಸ್‌’ ಸಂಘಟನೆಯ ನಾಯಕ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರಿಗೂ ಕೆನಡಾ ಪರವಾಗಿರಿ, ಇಲ್ಲವೇ ಭಾರತಕ್ಕೆ ತೊಲಗಿ ಎಂದೂ ಎಚ್ಚರಿಸಿದ್ದಾನೆ.ಖಲಿಸ್ತಾನಿ ಉಗ್ರರ ವಿಷಯ ಭಾರತ- ಕೆನಡಾ ಮತ್ತು ಭಾರತ- ಅಮೆರಿಕ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ಹೊತ್ತಿನಲ್ಲೇ, ಹಾಲಿ ಅಮೆರಿಕದಲ್ಲಿ ಆಶ್ರಯ ಪಡೆದಿರುವ ಪನ್ನೂನ್‌ ಇಂಥದ್ದೊಂದು ಬೆದರಿಕೆ ಹಾಕಿದ್ದಾನೆ.

ವಿಡಿಯೋದಲ್ಲೇನಿದೆ?:

‘ಹಿಂದುತ್ವದ ಹಿಂಸಾಚಾರ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ತಳಪಾಯವನ್ನು ನಾವು ಅಲುಗಾಡಿಸುತ್ತೇವೆ. ಕೆನಡಾದಲ್ಲಿ ಭಾರತೀಯ ಉಗ್ರ ರಾಜತಾಂತ್ರಿಕರ ಮುಂದಿನ ಸವಾಲು ನ.16 ಮತ್ತು 17ರಂದು ಇರಲಿದೆ. ಅಂದು ನಾವು ಅಯೋಧ್ಯೆ ರಾಮಮಂದಿರ, ಕೆನಡಾದ ಕಾಲಿಬರಿ ಮಂದಿರ, ತ್ರಿವೇಣಿ ಮಂದಿರದ ಮೇಲೆ ದಾಳಿ ನಡೆಸಲಿದ್ದೇವೆ. ಹೀಗಾಗಿ ಅಂದು ಕೆನಡಾದಲ್ಲಿನ ಭಾರತೀಯರು ಈ ದೇಗುಲದಿಂದ ದೂರ ಇರಬೇಕು ಎಂದು ಪನ್ನೂ ಎಚ್ಚರಿಸಿದ್ದಾನೆ. ಜೊತೆಗೆ ಆತನ ವಿಡಿಯೋದಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಮೋದಿ ದೇಗುಲದಲ್ಲಿ ಪ್ರಾರ್ಥನೆ ಮಾಡುತ್ತಿರುವ ದೃಶ್ಯಗಳೂ ಇವೆ.

ದಾಳಿಗೆ ಕಾರಣ ಏನು?:

1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್‌ ಹತ್ಯಾಕಾಂಡಕ್ಕೆ ಇದೀಗ 40 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಅದೇ ಅವಧಿಯಲ್ಲಿ ದಾಳಿಯ ಎಚ್ಚರಿಕೆಯನ್ನು ಖಲಿಸ್ತಾನಿ ಉಗ್ರ ನೀಡಿದ್ದಾನೆ.

ಕಿಡಿಗೇಡಿ ಕೃತ್ಯ

ಕನ್ನಡಿಗ ಕೆನಡಾ ಸಂಸದ ಚಂದ್ರ ಆರ್ಯಗೂ ಬೆದರಿಕೆ

- ನ.16, 17ರಂದು ದಾಳಿ ನಡೆಸುವುದಾಗಿ ಉಗ್ರ ಎಚ್ಚರಿಕೆ-----

- ಪದೇಪದೇ ಭಾರತವನ್ನು ಗುರಿಯಾಗಿಸಿ ಬೆದರಿಕೆ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿರುವ ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು

- 1984ರ ಸಿಖ್‌ ಹತ್ಯಾಕಾಂಡಕ್ಕೆ 40 ವರ್ಷ ತುಂಬುತ್ತಿರುವುದರಿಂದ ಮತ್ತೆ ಹಿಂದುಗಳ ಮೇಲೆ ದಾಳಿ ನಡೆಸುವುದಾಗಿ ಈಗ ಬೆದರಿಕೆ

- ಅಯೋಧ್ಯೆಯ ರಾಮಮಂದಿರ, ಕೆನಡಾದ ಕಾಲಿಬರಿ ಮಂದಿರ, ತ್ರಿವೇಣಿ ಮಂದಿರದ ಮೇಲೆ ನ.16, 17ರಂದು ದಾಳಿ ನಡೆಸುವ ಎಚ್ಚರಿಕೆ

- ಈ ದಿನ ಕೆನಡಾದಲ್ಲಿರುವ ಭಾರತೀಯರು ಮಂದಿರಗಳಿಗೆ ಹೋಗಬೇಡಿ ಎಂದು ವಿಡಿಯೋದಲ್ಲಿ ಹೇಳಿದ ಪನ್ನು