ಸಾರಾಂಶ
ತೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (62) ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ರಭಸದ ಭೂಸ್ಪರ್ಶ ಮಾಡಿದ್ದು, ಪತನಗೊಂಡಿದೆ ಎಂದು ಶಂಕಿಸಲಾಗಿದೆ. ರೈಸಿ ಅವರಿಗೆ ಘಟನೆಯಲ್ಲಿ ಏನಾದರೂ ಆಗಿದೆಯೇ ಎಂಬುದು ತಿಳಿದುಬಂದಿಲ್ಲ. ಹೆಲಿಕಾಪ್ಟರ್‌ಗೆ 40 ತಂಡಗಳಿಂದ ಶೋಧ ನಡೆದಿದೆ.
ಇಸ್ರೇಲ್ ಜೊತೆಗಿನ ಇರಾನ್ ವೈಷಮ್ಯ ತಾರಕಕ್ಕೆ ಏರಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಜೋಲ್ಫಾ ಬಳಿ ಭಾನುವಾರ ಈ ಘಟನೆ ಸಂಭವಿಸಿದೆ. ಹೆಲಿಕಾಪ್ಟರ್‌ನೊಂದಿಗೆ ರೇಡಿಯೊ ಸಂಪರ್ಕ ಸ್ಥಾಪಿಸಲಾಗಿದ್ದು ಶೋಧ ನಡೆದಿದೆ. 40 ರಕ್ಷಣಾ ತಂಡಗಳು ಶೋಧ ನಡೆಸುತ್ತಿದ್ದು, ಶೋಧದ ಬಳಿಕ ಸ್ಥಿತಿಗತಿ ಬಗ್ಗೆ ಇನ್ನಷ್ಟು ವಿವರ ನೀಡಲಾಗುವುದು ಎಂದು ಇರಾನ್ ಸರ್ಕಾರಿ ಟೀವಿ ವರದಿ ಮಾಡಿದೆ.
ಅಜರ್‌ಬೈಜಾನ್‌ಗೆ ಅಣೆಕಟ್ಟೆ ಉದ್ಘಾಟನೆಗೆಂದು ಹೋಗಿದ್ದ ಅಧ್ಯಕ್ಷ ರೈಸಿ ಅವರು ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಹಾಗೂ ಇತರ ಸಚಿವರು/ ಅಧಿಕಾರಿಗಳೊಂದಿಗೆ ತೆಹ್ರಾನ್‌ಗೆ ಮರಳುತ್ತಿದ್ದರು. ಒಟ್ಟು 3 ಹೆಲಿಕಾಪ್ಟರ್‌ಗಳು ಈ ತಂಡದಲ್ಲಿದ್ದವು. ಆಗ ಈ ಘಟನೆ ಸಂಭವಿಸಿದೆ. ಘಟನೆ ಬಳಿಕ 3ರ ಪೈಕಿ 2 ಹೆಲಿಕಾಪ್ಟರ್ ಸುರಕ್ಷಿತವಾಗಿ ವಾಪಸಾಗಿವೆ. ಅಧ್ಯಕ್ಷರ ಜತೆ ಇದ್ದ ಜನರು ತುರ್ತು ಕರೆ ಮಾಡಿ ಘಟನೆಯ ಮಾಹಿತಿ ನೀಡಿದರು ಎಂದು ಟೀವಿ ಹೇಳಿದೆ.ವಿವಿಧ 40 ರಕ್ಷಣಾ ತಂಡಗಳು ಘಟನೆಯ ಸ್ಥಳದಲ್ಲಿ ಶೋಧ ನಡೆಸಿವೆ. ಆದರೆ ಮಂಜು ಮತ್ತು ಕೆಟ್ಟ ಹವಾಮಾನದ ಕಾರಣದಿಂದಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಆಂತರಿಕ ಸಚಿವ ಅಹ್ಮದ್ ವಹೀದಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))