ಉಕ್ರೇನ್‌ ದಾಳಿಗೆ ಗುಜರಾತ್‌ ಯುವಕ ಬಲಿ

| Published : Feb 27 2024, 01:34 AM IST

ಸಾರಾಂಶ

2 ಲಕ್ಷ ರು. ವೇತನ ನಂಬಿ ರಷ್ಯಾಕ್ಕೆ ತೆರಳಿದ್ದ ಹೆಮಿಲ್‌ ಅಲ್ಲಿ ಉಕ್ರೇನ್‌ ನಡೆಸಿದ ಮಿಸೈಲ್‌ ದಾಳಿಗೆ ಸಾವನ್ನಪ್ಪಿದ್ದಾನೆ.

ಸೂರತ್‌: ಕನ್ನಡಿಗರೂ ಸೇರಿದಂತೆ ನೂರಾರು ಭಾರತೀಯರು ರಷ್ಯಾದಲ್ಲಿ ಬಲವಂತವಾಗಿ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ನೂಕಲ್ಪಟ್ಟಿದ್ದಾರೆ ಎಂಬ ಸುದ್ದಿಗಳ ನಡುವೆಯೇ, ಉಕ್ರೇನ್‌ ನಡೆಸಿದ ಕ್ಷಿಪಣಿ ದಾಳಿಗೆ ಗುಜರಾತ್‌ ಮೂಲದ ಯುವಕನೊಬ್ಬ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಸೂರತ್‌ನ ಹೆಮಿಲ್‌ ಮನ್‌ಗುಕಿಯಾ (23) ಫೆ.21ರಂದು ಸಾವನ್ನಪ್ಪಿದ್ದಾನೆ ಎಂದು ಆತನೊಂದಿಗೆ ಯುದ್ಧಭೂಮಿಯಲ್ಲಿರುವ ಭಾರತೀಯ ಯುವಕರು ಹೆಮಿಲ್‌ನ ದೂರವಾಣಿ ಕರೆ ಮಾಡಿ ಈ ಮಾಹಿತಿ ನೀಡಿದ್ದಾರೆ.ಅತ್ಯಂತ ಬಡ ಕುಟುಂಬಕ್ಕೆ ಸೇರಿದ ಹೆಮಿಲ್‌ನ ಪೋಷಕರು, ಇದೀಗ ತಮ್ಮ ಮಗನ ಶವ ಎಲ್ಲಿದೆ ಎಂಬುದೂ ಗೊತ್ತಿಲ್ಲ. ಯಾರನ್ನು ಸಂಪರ್ಕಿಸಬೇಕು ಎಂಬುದೂ ಗೊತ್ತಾಗುತ್ತಿಲ್ಲ. ಹೇಗಾದರೂ ಮಾಡಿ ಸರ್ಕಾರ ನಮ್ಮ ಮಗನ ಶವವನ್ನು ತವರಿಗೆ ಕರೆತರಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.ಭಾರೀ ವೇತನದ ಆಫರ್‌:ಪಿಯುಸಿ ಬಳಿಕ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ್ದ ಹೆಮಿಲ್‌, ಸಣ್ಣ ಎಂಬ್ರಾಯ್ಡರಿ ಕೆಲಸ ಮಾಡುತ್ತಿದ್ದ. ಈ ನಡುವೆ ಮಧ್ಯವರ್ತಿಯೊಬ್ಬನ ಸಂಪರ್ಕಕ್ಕೆ ಬಂದಿದ್ದ ಹೆಮಿಲ್‌, ಮಾಸಿಕ 2 ಲಕ್ಷ ರು. ವೇತನದ ಆಫರ್‌ ನಂಬಿ ಕಳೆದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ತೆರಳಿದ್ದ. ಈ ವೇಳೆ ಹೆಲ್ಪರ್‌ ಕೆಲಸಕ್ಕಾಗಿ ತೆರಳುತ್ತಿರುವುದಾಗಿ ಹೇಳಿದ್ದ.ಆದರೆ ಅಲ್ಲಿಗೆ ತೆರಳಿದ ಕೆಲ ದಿನಗಳ ಬಳಿಕ ರಷ್ಯಾ ಭಾಷೆಯಲ್ಲಿದ್ದ ಕೆಲ ದಾಖಲೆಗಳಿಗೆ ಆತನಿಂದ ಸಹಿ ಹಾಕಿಸಿಕೊಂಡು ಆತನನ್ನು ಯುದ್ಧಭೂಮಿಗೆ ಕಳುಹಿಸಲಾಗಿತ್ತು. ಹೀಗೆ ತಾನು ವಂಚನೆಗೆ ಒಳಗಾದ ವಿಷಯ ಬೆಳಕಿಗೆ ಬಂದ ಬಳಿಕ ಹೆಮಿಲ್‌ ತವರಿಗೆ ಮರಳುವ ಬಯಕೆ ವ್ಯಕ್ತಪಡಿಸಿದರೂ ಯಾರೂ ಆತನ ಮಾತು ಕೇಳಿಸಿಕೊಂಡಿರಲಿಲ್ಲ ಎಂದು ಆತನ ಪೋಷಕರು ನೋವು ತೋಡಿಕೊಂಡಿದ್ದಾರೆ.ಫೆ.20ರಂದು ಕೂಡಾ ಹೆಮಿಲ್‌ ಮನೆಗೆ ಕರೆ ಮಾಡಿದ್ದರೂ ಹೆಚ್ಚಿನ ಮಾಹಿತಿ ಏನೂ ಹಂಚಿಕೊಂಡಿರಲಿಲ್ಲ. ಈ ನಡುವೆ ಫೆ.23ರಂದು ಕರೆ ಮಾಡಿದ್ದ ಹೈದ್ರಾಬಾದ್‌ ಮೂಲದ ಇಮ್ರಾನ್‌ ಎಂಬ ಯುವಕ, ಕ್ಷಿಪಣಿ ದಾಳಿಯಲ್ಲಿ ಹೆಮಿಲ್‌ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ನೀಡಿದ್ದಾನೆ. ಈ ವೇಳೆ ತನ್ನ ಸೋದರ ಕೂಡಾ ರಷ್ಯಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಇಮ್ರಾನ್‌ ಮಾಹಿತಿ ನೀಡಿದ್ದಾನೆ ಎಂದು ಹೆಮಿಲ್‌ನ ಪೋಷಕರು ಮಾಹಿತಿ ನೀಡಿದ್ದಾರೆ.