ಸಾರಾಂಶ
ಜೆರುಸಲೇಂ: ಪೇಜರ್, ವಾಕಿಟಾಕಿ ಸ್ಫೋಟದ ಬೆನ್ನಲ್ಲೇ ಆರಂಭಗೊಂಡಿದ್ದ ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ನಡುವಿನ ಕದನ ಶುಕ್ರವಾರ ಮತ್ತಷ್ಟು ಸ್ಫೋಟಗೊಂಡಿದೆ.
ಪರಸ್ಪರರ ಮೇಲೆ ಉಭಯ ಪಂಗಡಗಳು ಒಟ್ಟಾರೆ 300ಕ್ಕೂ ಹೆಚ್ಚು ರಾಕೆಟ್ ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿವೆ. ಈ ವೇಳೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಇಬ್ರಾಂಹಿಂ ಅಕಿಲ್ ಎಂಬಾತ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಹಿಜ್ಬುಲ್ಲಾ ಉಗ್ರರು ಕೂಡಾ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಇಸ್ರೇಲ್ ಕಡೆಯಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ಮಧ್ಯಾಹ್ನ ಹಿಜ್ಬುಲ್ಲಾಗಳು ಇಸ್ರೇಲ್‌ನ ಉತ್ತರ ಭಾಗಗಳ ಮೇಲೆ ಮೂರು ಸುತ್ತಿನಲ್ಲಿ 140 ರಾಕೆಟ್ ದಾಳಿ ನಡೆಸಿದೆ. ಇದರಿಂದ ಕಿಂಚಿತ್ತೂ ಸಮಯ ವ್ಯರ್ಥ ಮಾಡದೆ ಲೆಬನಾನ್‌ನ ರಾಜಧಾನಿ ಬೈರೂತ್ ನಗರದ ಮೇಲೆ ಇಸ್ರೇಲಿ ಪಡೆಗಳು ಭೀಕರವಾಗಿ ರಾಕೆಟ್‌ಗಳ ಮಳೆಯನ್ನೇ ಸುರಿಸಿವೆ.
ಅಮೆರಿಕದ ಮೋಸ್ಟ್ ವಾಂಟೆಡ್:
ಇಬ್ರಾಹಿಂ ಅಕಿಲ್ ಹಿಜ್ಬುಲ್ಲಾ ಪಡೆಯ ಉನ್ನತ ಕಮಾಂಡರ್ ಆಗಿದ್ದು, 1983ರಲ್ಲಿ ಬೈರೂತ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿ ಬಳಿ ಸ್ಫೋಟ ನಡೆಸಿ 300 ಜನರ ಸಾವಿಗೆ ಕಾರಣನಾಗಿದ್ದ. ಈತನ ಪತ್ತೆಗೆ ಅಮೆರಿಕ 9 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.
ದಾಳಿ ಹಿನ್ನೆಲೆ:
ಗುರುವಾರ ಲೆಬನಾನ್ ಮೇಲೆ ಇಸ್ರೇಲಿಗರು ದಾಳಿ ನಡೆಸಿದ ಕಾರಣ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ತಾವು ಪ್ರತಿಕಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಹಿಜ್ಬುಲ್ಲಾ ದಾಳಿ ನಡೆಸಿದ್ದು, ಇಸ್ರೇಲ್ ಸಹ ಪ್ರತಿ ದಾಳಿ ನಡೆಸಿದೆ.