ಸಾರಾಂಶ
ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ ಅಕ್ರಮ ಮದುವೆ ಆರೋಪದ ಹಿನ್ನೆಲೆಯಲ್ಲಿ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇಸ್ಲಾಮಾಬಾದ್: ಕಾನೂನುಬಾಹಿರವಾಗಿ ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ವಿವಾಹವಾಗಿದ್ದಾರೆಂದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮೊದಲು ಇಮ್ರಾನ್ ದಂಪತಿಗೆ ತೋಶಾಖಾನಾ ಪ್ರಕರಣದಲ್ಲಿ ತಲಾ 14 ವರ್ಷ ಜೈಲು ಶಿಕ್ಷೆ. ಇದಾದ 2 ದಿನದಲ್ಲೇ ಇನ್ನೊಂದು ಶಿಕ್ಷೆ ಎದುರಾಗಿದೆ.
ಬುಶ್ರಾ ಬೀಬಿಯ ವಿಚ್ಛೇದಿತ ಪತಿ ಖಾವರ್ ಮನೇಕಾ ದಾಖಲಿಸಿದ್ದ ಪ್ರಕರಣದಲ್ಲಿ ಇಮ್ರಾನ್ ಹಾಗೂ ಬುಶ್ರಾ ‘ಇದ್ದತ್’ (ಮರುಮದುವೆಗೆ ಕಾಯುವ ಸಮಯ) ಅವಧಿಯೊಳಗೆ ವಿವಾಹವಾಗಿದ್ದಾರೆ ಮತ್ತು ಮದುವೆಗೆ ಮುಂಚೆಯೇ ಪರಸ್ಪರರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.