ಸೇನಾ ಕಚೇರಿ ಮೇಲೆ ದಾಳಿ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅರೆಸ್ಟ್‌!

| Published : Jan 10 2024, 01:45 AM IST / Updated: Jan 10 2024, 05:38 PM IST

ಸೇನಾ ಕಚೇರಿ ಮೇಲೆ ದಾಳಿ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅರೆಸ್ಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಇಮ್ರಾನ್‌ ವಿರುದ್ಧ ಮತ್ತೆರಡು ಪ್ರಕರಣ ದಾಖಲಾಗಿದ್ದು, ಜೈಲಿನಲ್ಲೇ ಉಳಿದಿದ್ದಾರೆ. ಈ ನಡುವೆ ಪಾಕಿಸ್ತಾನದಲ್ಲಿ ಪೊಲಿಯೋ ಲಸಿಕೆ ಹಾಕಲು ಬಂದ ಜನರ ಮೇಲೆ ಬಾಂಬ್‌ ದಾಳಿ ನಡೆಸಿದ ಕಾರಣ 7 ಮಂದಿ ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್: ಸರ್ಕಾರಕ್ಕೆ ಸಂಬಂಧಿಸಿದ ಗುಪ್ತ ದಾಖಲೆ ಬಹಿರಂಗಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ರಾವಲ್ಪಿಂಡಿಯ ಕೋರ್ಟ್‌ ಜಾಮೀನು ನೀಡಿದೆ. ಆದರೆ ಕಳೆದ ಮೇ 9 ರಂದು ಪಾಕಿಸ್ತಾನದ ಮುಖ್ಯ ಸೇನಾ ಕಚೇರಿಯ ಮೇಲೆ ದಾಳಿ ಮಾಡಿದ ಸಂಬಂಧ ಬಂಧನಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಇಮ್ರಾನ್‌ ಜೈಲಿನಲ್ಲೇ ಉಳಿಯುವಂತಾಗಿದೆ.

ಇದರ ಜೊತೆಗೆ ಮತ್ತೊಂದು ಪ್ರಕರಣದಲ್ಲಿ ಇಮ್ರಾನ್‌ ದಂಪತಿಗೆ ಸಂಕಷ್ಟ ಎದುರಾಗಿದ್ದು, ತೋಷಾಖಾನಾ(ಸರ್ಕಾರಿ ಖಜಾನೆ)ಗೆ ಉಡುಗೊರೆಗಳನ್ನು ಹೂಡಿಕೆ ಮಾಡದಿರುವುದು ಹಾಗೂ ಕಡಿಮೆ ಹಣವನ್ನು ಪಾವತಿಸಿ ತಮ್ಮಲ್ಲೇ ಉಡುಗೊರೆಗಳನ್ನು ಉಳಿಸಿಕೊಂಡಿದ್ದಾರೆ ಎಂದು ಇಮ್ರಾನ್‌ ಖಾನ್‌ ಮತ್ತು ಪತ್ನಿ ಬುಷ್ರಾ ಬೀಬಿ ಮೇಲೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ದೋಷಾರೋಪ ಹೊರಿಸಿದೆ.

ಪಾಕಲ್ಲಿ ಪೋಲಿಯೋ ಲಸಿಕೆ ಹಾಕಲು ಬಂದವರ ಮೇಲೆ ಬಾಂಬ್‌: 7 ಜನರ ಸಾವು
ಮಾರಕ ಪೋಲಿಯೋ ವ್ಯಾಧಿಯ ವಿರುದ್ಧ ಮುಂಜಾಗ್ರತಾ ಲಸಿಕೆ ಹಾಕಲು ಬಂದವರ ವಿರುದ್ಧ ನಡೆಸಲಾದ ಬಾಂಬ್‌ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ವಾಯುವ್ಯ ಭಾಗದ ಮಾಮುಂಡ್‌ ಜಿಲ್ಲೆಯಲ್ಲಿ ನಡೆದಿದೆ.

 ದಾಳಿಯ ಹೊಣೆಯನ್ನು ತಾಲಿಬಾನ್‌ ಮತ್ತು ಐಸಿಸ್‌ ಉಗ್ರ ಸಂಘಟನೆಗಳು ಹೊತ್ತುಕೊಂಡಿವೆ. ಪೋಲಿಯೋ ಲಸಿಕೆ ಪಡೆದರೆ ಸಂತಾನ ಶಕ್ತಿ ಹರಣವಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿರುವ ಕಾರಣ ಪಾಕಿಸ್ತಾನದಲ್ಲಿ ಹಲವು ವರ್ಷಗಳಿಂದ ಲಸಿಕಾ ಅಭಿಯಾನಕ್ಕೆ ಭಾರೀ ಹಿನ್ನಡೆಯಾಗಿದೆ.

 ಹೀಗಾಗಿ ಲಸಿಕೆ ನೀಡುವ ಸಿಬ್ಬಂದಿ ಜೊತೆಗೆ ಪೊಲೀಸರನ್ನು ರಕ್ಷಣೆಗೆ ಕಳುಹಿಸಲಾಗುತ್ತಿದೆ. ಆದರೆ ಅವರ ಮೇಲೇ ಬಾಂಬ್‌ ದಾಳಿ ನಡೆಸಿ ಅಭಿಯಾನಕ್ಕೆ ಹಿನ್ನಡೆ ಉಂಟು ಮಾಡುವ ಯತ್ನಗಳು ಮುಂದುವರೆದಿವೆ.