ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್‌ನಿಂದ ಕಾಶ್ಮೀರ ತಗಾದೆ: ಭಾರತದ ಚಾಟಿ

| Published : Mar 01 2024, 02:16 AM IST

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್‌ನಿಂದ ಕಾಶ್ಮೀರ ತಗಾದೆ: ಭಾರತದ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚದಾದ್ಯಂತ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮೂಲಕ ರಕ್ತಪಾತದ ಕೆಂಪಿನಲ್ಲಿ ನೆನೆದಿರುವ ಪಾಕಿಸ್ತಾನದ ಬಗ್ಗೆ ಗಮನ ಹರಿಸಲು ತನಗೆ ಸಾಧ್ಯವಿಲ್ಲ ಎಂದು ಭಾರತ ಬುಧವಾರ ಹೇಳಿದೆ.

ವಿಶ್ವಸಂಸ್ಥೆ: ಪ್ರಪಂಚದಾದ್ಯಂತ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮೂಲಕ ರಕ್ತಪಾತದ ಕೆಂಪಿನಲ್ಲಿ ನೆನೆದಿರುವ ಪಾಕಿಸ್ತಾನದ ಬಗ್ಗೆ ಗಮನ ಹರಿಸಲು ತನಗೆ ಸಾಧ್ಯವಿಲ್ಲ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.ತಮ್ಮ ಭಾಷಣದಲ್ಲಿ ಟರ್ಕಿ ಹಾಗೂ ಪಾಕಿಸ್ತಾನಗಳು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಬಳಿಕ ಭಾರತದ ಪರವಾಗಿ ಭಾರತದ ಕಾರ್ಯದರ್ಶಿ ಅನುಪಮಾ ಸಿಂಗ್‌ ಪ್ರತಿಕ್ರಿಯಿಸಿದರು. ‘ಮೊದಲನೆಯದಾಗಿ ಭಾರತದ ಆಂತರಿಕ ವಿಷಯಗಳಲ್ಲಿ ಟರ್ಕಿ ನೀಡಿದ ಪ್ರತಿಕ್ರಿಯೆಗೆ ನಾವು ವಿಷಾದಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಅನಪೇಕ್ಷಿತ ಮಾತುಗಳನ್ನಾಡುವುದನ್ನು ಆ ದೇಶ ನಿಲ್ಲಿಸುತ್ತದೆ ಎಂದು ಭಾವಿಸುತ್ತೇವೆ’ ಎಂದು ಅವರು ಹೇಳಿದರು. ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಜಗತ್ತಿನಾದ್ಯಂತ ಅದು ಪ್ರಾಯೋಜಿಸುತ್ತಿರುವ ಭಯೋತ್ಪಾದನೆಯ ರಕ್ತಪಾತದಿಂದ ಪಾಕಿಸ್ತಾನ ಕೆಂಪಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದ ಆಯವ್ಯಯ ಕೆಂಪಾಗಿದೆ. ಅಲ್ಲದೇ ತನ್ನದೇ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪಾಕಿಸ್ತಾನ ಸೋತು ಅವಮಾನಕ್ಕೆ ತುತ್ತಾಗಿದೆ. ಇಂತಹ ದೇಶ ಆಡುವ ಮಾತುಗಳಿಗೆ ನಾವು ಗಮನ ಹರಿಸುವುದಿಲ್ಲ ಎಂದು ಹೇಳಿದರು.ಅಲ್ಲದೇ ಜಮ್ಮು ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಮಹತ್ತರವಾದುದನ್ನು ಸಾಧಿಸುತ್ತಿರುವ ಸಮಯದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ಕೇವಲ ವ್ಯಂಗವಲ್ಲ. ಇದು ವಿಕೃತ ಎಂದು ಅವರು ಹೇಳದರು.