ಇಸ್ರೇಲ್‌- ಹಮಾಸ್ ಸಂಘರ್ಷ ತೀವ್ರವಾಗುತ್ತಿರುವ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ರಕ್ಷಣೆಗೆ ಕೇಂದ್ರ ಸರ್ಕಾರ ‘ಆಪರೇಷನ್‌ ಅಜಯ್‌’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ಇಸ್ರೇಲ್‌ನಲ್ಲಿ ಅಂದಾಜು 18000 ಭಾರತೀಯರು ಇದ್ದಾರೆ ಎನ್ನಲಾಗಿದೆ.

ನವದೆಹಲಿ: ಇಸ್ರೇಲ್‌- ಹಮಾಸ್ ಸಂಘರ್ಷ ತೀವ್ರವಾಗುತ್ತಿರುವ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ರಕ್ಷಣೆಗೆ ಕೇಂದ್ರ ಸರ್ಕಾರ ‘ಆಪರೇಷನ್‌ ಅಜಯ್‌’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ಇಸ್ರೇಲ್‌ನಲ್ಲಿ ಅಂದಾಜು 18000 ಭಾರತೀಯರು ಇದ್ದಾರೆ ಎನ್ನಲಾಗಿದೆ. ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ‘ಇಸ್ರೇಲ್‌ನಲ್ಲಿದ್ದು ಭಾರತಕ್ಕೆ ಮರಳಲು ಬಯಸಿರುವ ನಾಗರಿಕರಿಗಾಗಿ ‘ಆಪರೇಷನ್‌ ಅಜಯ್‌’ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ. ಇದಕ್ಕಾಗಿ ವಿಶೇಷ ವಿಮಾನ ಮತ್ತು ಇತರೆ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ವಿದೇಶದಲ್ಲಿರುವ ನಮ್ಮ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಸಂಪೂರ್ಣ ಬದ್ಧ’ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ, ಭಾರತೀಯರ ಕರೆತರಲು ಮೊದಲ ವಿಮಾನ ಗುರುವಾರ ಇಸ್ರೇಲ್‌ಗೆ ಪ್ರಯಾಣ ಬೆಳೆಸಲಿದೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ, ಯೆಮನ್‌, ಇರಾಕ್‌, ಲೆಬನಾನ್‌, ನೇಪಾಳ, ಉಕ್ರೇನ್‌, ಲಿಬಿಯಾ, ಕುವೈತ್‌ ಮೊದಲಾದ ದೇಶಗಳಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತೀಯರ ತೆರವಿಗೂ ಕೇಂದ್ರ ಸರ್ಕಾರ ಇದೇ ರೀತಿಯ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು.