ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ ನಡೆ. ಪ್ಯಾಲೆಸ್ತೀನಲ್ಲಿ ವಸಾಹತು ಖಂಡಿಸಿ ಮತ.
ನವದೆಹಲಿ: ‘ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ವಾಸನೆಲೆಗಳನ್ನು ಸ್ಥಾಪಿಸುವುದು ಅಕ್ರಮ’ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ ಹಾಕಿರುವುದು ರಾಜತಾಂತ್ರಿಕ ವಲಯದಲ್ಲಿ ಭಾರಿ ಅಚ್ಚರಿಗೆ ಕಾರಣವಾಗಿದೆ.‘ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಭೂಭಾಗ ಹಾಗೂ ಆಕ್ರಮಿತ ಸಿರಿಯನ್ ಗೋಲನ್‌ನಲ್ಲಿ ಇಸ್ರೇಲ್‌ನ ವಸಾಹತು ಸ್ಥಾಪನೆ’ ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿತ್ತು. ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿದವು. ಅಮೆರಿಕ, ಕೆನಡಾ, ಇಸ್ರೇಲ್ ಸೇರಿ 7 ದೇಶಗಳು ವಿರುದ್ಧ ಮತ ಹಾಕಿದರೆ, 18 ದೇಶಗಳು ತಟಸ್ಥವಾಗಿ ಉಳಿದವು. ಹೀಗಾಗಿ ನಿರ್ಣಯ ಅಂಗೀಕಾರವಾಯಿತು.ಗಾಜಾ ಪಟ್ಟಿಯಲ್ಲಿ ತಕ್ಷಣ, ದೀರ್ಘಕಾಲಿನ ಹಾಗೂ ಸುಸ್ಥಿರ ಮಾನವೀಯ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಕೆಲವೇ ವಾರಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಯುದ್ಧ ನಿಲ್ಲಿಸುವ ಪರ ಆ ನಿರ್ಣಯ ಇದ್ದ ಕಾರಣ ಭಾರತ ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದಿತ್ತು. ಆದರೆ ಈಗ ಪ್ಯಾಲೆಸ್ತೀನ್ ಭೂಭಾಗದಲ್ಲಿ ಇಸ್ರೇಲ್ ವಸಾಹತು ಸ್ಥಾಪನೆ ಖಂಡಿಸುವ ನಿರ್ಣಯದ ಪರ ಮತ ಚಲಾವಣೆ ಮಾಡಿದೆ.ನಿರ್ಣಯ ಏನು ಹೇಳುತ್ತದೆ?:ಪ್ಯಾಲೆಸ್ತೀನ್ ಭೂಭಾಗದಲ್ಲಿ ಜಾಗ ಕಸಿಯುವುದು, ಸಂರಕ್ಷಿತ ಜನರ ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುವುದು, ಬಲವಂತವಾಗಿ ನಾಗರಿಕರನ್ನು ಸ್ಥಳಾಂತರಿಸುವುದು, ಜಾಗವನ್ನು ಕಬಳಿಸುವುದನ್ನು ಖಂಡಿಸುವ ಅಂಶ ನಿರ್ಣಯದಲ್ಲಿದೆ.