ಸಾರಾಂಶ
ಕಡಲ್ಗಳ್ಳರ ವಿರುದ್ಧ ಭಾರತ ಸಮರ ಮುಂದುವರಿಕೆ ಮಾಡಿದ್ದು, ಪಾಕಿಸ್ತಾನದ ಮೀನುಗಾರರನ್ನು ಭಾರತೀಯ ನೌಕಾಪಡೆ ಸುಮಿತ್ರಾ ರಕ್ಷಿಸಿದೆ.
ನವದೆಹಲಿ: ಸೊಮಾಲಿಯಾದ ಪೂರ್ವ ತೀರದಲ್ಲಿ ಕಡಲ್ಗಳ್ಳರ ದಾಳಿಗೆ ತುತ್ತಾಗಿದ್ದ ಮೀನುಗಾರಿಕೆ ಹಡಗಿನಲ್ಲಿದ್ದ 19 ಮಂದಿ ಪಾಕಿಸ್ತಾನಿ ಮೀನುಗಾರರನ್ನು ನೌಕಾಪಡೆಯ ಐಎಸ್‌ಎಸ್ ಸುಮಿತ್ರಾ ನೌಕೆ ರಕ್ಷಿಸಿದೆ.
ಇರಾನ್ ಒಡೆತನದ ಅಲ್ ನಯೀಮಿ ಹಡಗಿನ ಮೇಲೆ ಮಂಗಳವಾರ ಸೊಮಾಲಿಯಾ ಕಡಲ್ಗಳ್ಳರು ದಾಳಿ ಮಾಡಿದ್ದರು. ಈ ವೇಳೆ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಭಾರತದ ನೌಕೆ ಮೀನುಗಾರರನ್ನು ರಕ್ಷಣೆ ಮಾಡಿದೆ. ಸೋಮಾಲಿಯಾ ಮತ್ತು ಏಡನ್ ಕೊಲ್ಲಿಯಲ್ಲಿ ಕಡಲ್ಗಳ್ಳರ ದಾಳಿಯಿಂದ ಹಡಗುಗಳನ್ನು ರಕ್ಷಣೆ ಮಾಡಲು ಐಎನ್‌ಎಸ್ ಸುಮಿತ್ರಾ ನೌಕೆಯಲ್ಲಿ ಭಾರತೀಯ ನೌಕಾಪಡೆ ನಿಯೋಜನೆ ಮಾಡಿದೆ. ‘ಐಎಸ್‌ಎಸ್ ಸುಮಿತ್ರಾ ಹಡಗು ಕಳೆದ 2 ದಿನಗಳಲ್ಲಿ 2 ಇರಾನ್ ಹಡಗುಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ್ದು, 17 ಇರಾನ್ ಮತ್ತು 19 ಮಂದಿ ಪಾಕಿಸ್ತಾನದವರು ಸೇರಿ 36 ಮಂದಿಯನ್ನು ರಕ್ಷಿಸಿದೆ. ಮತ್ತೊಮ್ಮೆ ಭಾರತೀಯ ನೌಕಾಪಡೆ ಈ ಪ್ರದೇಶದಲ್ಲಿ ರಕ್ಷಣೆ ಒದಗಿಸುವ ತಮ್ಮ ಕ್ಷಮತೆಯನ್ನು ಸಾಬೀತು ಮಾಡಿದೆ ಎಂದು ಭಾರತೀಯ ನೌಕಾಪಡೆಯ ಕಮಾಂಡರ್ ವಿವೇಕ್ ಮಾಧ್ವಾಲ್ ಹೇಳಿದ್ದಾರೆ.