ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಬ್ಲೂವೇಲ್‌ ಕಾರಣ?

| Published : Apr 21 2024, 02:15 AM IST / Updated: Apr 21 2024, 04:05 AM IST

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಬ್ಲೂವೇಲ್‌ ಕಾರಣ?
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮಾರ್ಚ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಯ ಸಾವಿನ ಕುರಿತು ತನಿಖೆ ಆರಂಭವಾಗಿದೆ.

ನ್ಯೂಯಾರ್ಕ್ : ಕಳೆದ ಮಾರ್ಚ್‌ ತಿಂಗಳಿನಲ್ಲಿ ಅಮೆರಿಕದಲ್ಲಿ ನಡೆದ ಭಾರತೀಯ ಮೂಲದ ವಿದ್ಯಾರ್ಥಿಯ ಆತ್ಮಹತ್ಯೆಗೆ ಬ್ಲೂವೇಲ್‌ ಗೇಮ್‌ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಮಸಾಚ್ಯುಸೆಟ್ಸ್‌ ವಿವಿಯಲ್ಲಿ ಮೊದಲನೇ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಇದಕ್ಕೆ ಕಾರಣ ತಿಳಿದುಬಂದಿರಲಿಲ್ಲ. ಆದರೆ ಇತ್ತೀಚೆಗೆ ಲಭ್ಯವಾದ ಕೆಲ ಮಾಹಿತಿಗಳು ಆತ್ಮಹತ್ಯೆಗೆ ವಿದ್ಯಾರ್ಥಿ ಬ್ಲೂವೇಲ್‌ ಗೇಮ್‌ ಕಾರಣವಿರಬಹುದು ಎಂಬ ಸುಳಿವು ಲಭ್ಯವಾಗಿದೆ. ಹೀಗಾಗಿ ಆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಬ್ಲೂವೇಲ್‌ ಗೇಮ್‌?

2015ರಲ್ಲಿ ಮೊದಲ ಬಾರಿಗೆ ರಷ್ಯಾದಲ್ಲಿ ಆಡಲಾದ ಈ ಆನ್‌ಲೈನ್‌ ಗೇಮ್‌ 4-5 ವರ್ಷಗಳ ಹಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ವ್ಯಾಪಿಸಿ ಹಲವರನ್ನು ಬಲಿ ಪಡೆದಿತ್ತು.

ಇದರಲ್ಲಿ ಆಟ ನಿರ್ವಹಣೆ ಮಾಡುವ ಅನಾಮಿಕ ವ್ಯಕ್ತಿ, ಆನ್‌ಲೈನ್‌ನಲ್ಲಿ ಲಭ್ಯರಾಗುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು 50 ದಿನಗಳ ಅವಧಿಯಲ್ಲಿ ವಿವಿಧ ರೀತಿಯ ಸವಾಲುಗಳನ್ನು ನೀಡುತ್ತಾ ಹೋಗುತ್ತಾನೆ. ಉದಾಹರಣೆಗೆ ಮೊದಲಿಗೆ ಮಧ್ಯರಾತ್ರಿಯಲ್ಲಿ ಏಳುವ ಸವಾಲು ಇರಬಹುದು. ಹಂತಹಂತವಾಗಿ ಸವಾಲಿನ ಗಂಭೀರತೆ ಹೆಚ್ಚುತ್ತಾ ಹೋಗುತ್ತದೆ. ಎತ್ತರದ ಕಟ್ಟಡದ ತುದಿಯಲ್ಲಿ ನಿಲ್ಲುವುದು, ಕೈ ಕತ್ತರಿಸಿಕೊಳ್ಳುವುದು, ಭೀತಿ ಹುಟ್ಟಿಸುವ ಚಲನಚಿತ್ರ ನೋಡುವುದು ಹೀಗೆ ಮುಂದುವರೆಯುತ್ತದೆ. ಅಂತಿಮ ಸವಾಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿರುತ್ತದೆ.

ಬಹುತೇಕ ಪ್ರಕರಣಗಳಲ್ಲಿ ಬೆದರಿಕೆ, ಬ್ಲ್ಯಾಕ್‌ಮೇಲ್‌ ಅಥವಾ ಮಾನಸಿಕವಾಗಿ ಒತ್ತಡ ಹೇರಿ ಆಟಗಾರರನ್ನು ಬಲೆಗೆ ಬೀಳಿಸಲಾಗುತ್ತದೆ.