ಪಾಕ್‌ ಉಗ್ರ ನೆಲೆ ಮೇಲೆ ಇರಾನ್‌ ಸರ್ಜಿಕಲ್ ದಾಳಿ

| Published : Jan 18 2024, 02:02 AM IST / Updated: Jan 18 2024, 07:45 AM IST

ಸಾರಾಂಶ

ಪಾಕ್‌ಗೆ ಇರಾನ್‌ ಸರ್ಜಿಕಲ್‌ ಶಾಕ್‌ ನೀಡಿದೆ. ಪಾಕಿಸ್ತಾನ ಉಗ್ರರ 2 ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದ್ದು, ಪಾಕ್‌ ಗರಂ ಆಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಇರಾನ್‌ ರಾಯಭಾರಿಯನ್ನು ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ಇರಾನ್‌ಗೆ ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದೆ.

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ‘ಜೈಷ್‌ ಎ ಅದ್ಲ್‌’ ಎಂಬ ಸುನ್ನಿ ಉಗ್ರ ಸಂಘಟನೆಯ 2 ನೆಲೆಗಳ ಮೇಲೆ ಇರಾನ್ ಮಂಗಳವಾರ ರಾತ್ರಿ ‘ಸರ್ಜಿಕಲ್‌’ ವಾಯುದಾಳಿ ನಡೆಸಿದೆ.

 ಇರಾನ್‌ ನಡೆಸಿದ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಯಲ್ಲಿ ಇರಾನ್‌ ಗಡಿಗೆ ಹೊಂದಿಕೊಂಡಿರುವ ಜೈಷ್‌ ಸಂಘಟನೆಯ 2 ನೆಲೆಗಳು ಧ್ವಂಸಗೊಂಡಿವೆ. ಇದರ ಬೆನ್ನಲ್ಲೇ ಪಾಕಿಸ್ತಾನ ಹಾಗೂ ಇರಾನ್‌ ನಡುವೆ ರಾಜತಾಂತ್ರಿಕ ಸಮರ ಆರಂಭವಾಗಿದೆ.

‘ಜೈಷ್‌ ಎ ಅದ್ಲ್‌ ಎಂಬ ಸುನ್ನಿ ಉಗ್ರ ಸಂಘಟನೆ ಪಾಕಿಸ್ತಾನವನ್ನು ನೆಲೆಯಾಗಿಸಿಕೊಂಡು ನಮ್ಮ ದೇಶದ ಸೇನೆ ಮೇಲೆ ದಾಳಿ ನಡೆಸುತ್ತಿದೆ’ ಎಂದು ಇರಾನ್ ಸರ್ಕಾರ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಬಲೂಚಿಸ್ತಾನ ಪ್ರಾಂತ್ಯದ 2 ಜೈಷ್‌ ಉಗ್ರ ನೆಲೆಗಳ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿ ನೆಲೆಗಳನ್ನು ಧ್ವಂಸ ಮಾಡಿದೆ.

ದಾಳಿ ಬೆನ್ನಲ್ಲೇ ರಾಜತಾಂತ್ರಿಕ ಸಮರ: ತನ್ನ ದೇಶದ ಉಗ್ರ ನೆಲೆಗಳ ಮೇಲೆ ಇರಾನ್‌ ಸೇನೆ ನಡೆಸಿದ ಡ್ರೋನ್‌ ಮತ್ತು ಕ್ಷಿಪಣಿ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. 

ಇದು ಅಪ್ರಚೋದಿತ ವಾಯುಸೀಮೆ ಉಲ್ಲಂಘನೆಯಾಗಿದೆ. ಇದು ಮುಂದುವರೆದರೆ ಇರಾನ್‌ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಲಿದೆ ಎಂದು ಪಾಕ್‌ ಎಚ್ಚರಿಕೆ ನೀಡಿದೆ.

ಅಲ್ಲದೆ, ಇರಾನ್‌ನಲ್ಲಿನ ತನ್ನ ರಾಯಭಾರಿಯನ್ನು ಪಾಕಿಸ್ತಾನ ಹಿಂಪಡೆದಿದೆ ಹಾಗೂ ಪಾಕ್‌ನಲ್ಲಿನ ಇರಾನ್ ರಾಯಭಾರಿಯನ್ನು ಉಚ್ಚಾಟಿಸಿದೆ.

ಈ ಬಗ್ಗೆ ಇರಾನ್‌ ರಾಯಭಾರ ಕಚೇರಿ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ, ‘ಏಕಪಕ್ಷೀಯ ವಾಯುಸೀಮೆ ಉಲ್ಲಂಘನೆ ಅತ್ಯಂತ ಗಂಭೀರ ಪ್ರಕರಣ. 

ನಮ್ಮ ಸಾರ್ವಭೌಮತೆ ಉಲ್ಲಂಘನೆಯನ್ನು ನಾವು ಅತ್ಯಂತ ಕಠಿಣವಾಗಿ ವಿರೋಧಿಸುತ್ತೇವೆ. ಇದು ಮುಂದುವರೆದರೆ ಇರಾನ್‌ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

ಇರಾನ್‌ ದಾಳಿ ಏಕೆ?
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ‘ಜೈಷ್‌ ಎ ಅದ್ಲ್’ ಎಂಬ ಉಗ್ರ ಸಂಘಟನೆ ಇದೆ. ಈ ಸಂಘಟನೆ ಪಾಕ್‌ನಿಂದ ತನ್ನ ಮೇಲೆ ದಾಳಿ ನಡೆಸುತ್ತಿದೆ ಎಂದು ಇರಾನ್‌ ಸಿಟ್ಟಿಗೆದ್ದು ಬಲೂಚಿಸ್ತಾನದ 2 ಉಗ್ರ ನೆಲೆಗಳ ಮೇಲೆ ಡ್ರೋನ್‌, ಕ್ಷಿಪಣಿ ಬಳಸಿ ದಾಳಿ ಮಾಡಿದೆ.

ಆಗ ಭಯೋತ್ಪಾದಕರ 2 ನೆಲೆಗಳು ಧ್ವಂಸಗೊಂಡಿದ್ದು,ಇರಾನ್‌- ಪಾಕ್‌ ನಡುವೆ ರಾಜತಾಂತ್ರಿಕ ಸಮರ ಏರ್ಪಟ್ಟಿದೆ.